
ಸಂಜೆ ವಾಣಿ ವಾರ್ತೆ
ಜಮಖಂಡಿ:ಫೆ.೩:ನೆಲದ ಸಂಸ್ಕೃತಿಯನ್ನು ರಕ್ಷಿಸಬೇಕಾಗಿದೆ. ಆದರೆ, ಅಭಿರುಚಿ ತಪ್ಪಿದೆ. ಕೇವಲ ಮನರಂಜನೆ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಿಲ್ಲ. ಸಂಸ್ಕೃತಿ ಮತ್ತು ಪರಂಪರೆಗೆ ಪೂರಕವಾದ ಸಾಹಿತ್ಯ ಇಂದಿನ ಅಗತ್ಯವಾಗಿದೆ ಎಂದ ಅಥಣಿ ಮೋಟಗಿ ಮಠದ ಡಾ.ಪ್ರಭುಚೆನ್ನಬಸವ ಮಹಾಸ್ವಾಮಿಗಳು ಹೇಳಿದರು.
ನಗರದ ಕೆಇಬಿ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ‘ಕೊಕ್ಕನವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಉದ್ಘಾಟನೆ’, ಪ್ರಶಸ್ತಿ ಪ್ರದಾನ ಹಾಗೂ ಡಾ.ವೈ.ವೈ. ಕೊಕ್ಕನವರ ವಿರಚಿತ ‘ಜಗವೆಲ್ಲ ನಗುತಿರಲಿ’ ಕೃತಿ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ.ಸುನಂದಾ ಶಿರೂರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಅಕಾಡೆಮಿ ಕಾರ್ಯ ಪ್ರವೃತ್ತವಾಗಲಿ ಎಂದರು.
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾವನೆಗಳನ್ನು ಕೆರಳಿಸುವ ಸಾಹಿತ್ಯ ರಚಿಸಬಾರದು. ಬದಲಾಗಿ ಭಾವನೆಗಳನ್ನು ಅರಳಿಸುವ ಸಾಹಿತ್ಯ ರಚಿಸಬೇಕು ಎಂದರು.
ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಇಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಯಶವಂತ ಕೊಕ್ಕನವರ ವಿವಿಧ ಆಯಾಮದಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಕಥೆ, ಕವನ, ಸಂಪಾದನೆ, ಸಂಶೋಧನೆ, ಆಧುನಿಕ ವಚನಗಳು ಹೀಗೆ ಹಲವಾರು ಕೃತಿ ರಚನೆ ಮಾಡಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಡಾ.ಯಶವಂತ ಕೊಕ್ಕನವರ ವಿರಚಿತ ‘ಜಗವೆಲ್ಲ ನಗುತಿರಲಿ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ನಿವೃತ್ತ ಪ್ರಾಚಾರ್ಯ ಡಾ.ವಿ.ಎಸ್. ಮಾಳಿ ಕೃತಿ ಪರಿಚಯಿಸಿದರು.
ಲಕ್ಶ್ಮಿ ಖವಾಸಿ ಅವರು ಪ್ರಾರ್ಥಿಸಿದರು. ಡಾ.ರಾಜು ಕೊಕ್ಕನವರ ಸ್ವಾಗತಿಸಿದರು. ಸರಿತಾ ಶಿರಗುಪ್ಪಿ ನಿರೂಪಿಸಿದರು. ಈರಪ್ಪ ಸುತಾರ ವಂದಿಸಿದರು.
























