Home ಜಿಲ್ಲೆ ಕಲಬುರಗಿ ಸ್ವಾವಲಂಬನೆ, ಘನತೆಯ ಬದುಕಿಗೆ ಸಾಕ್ಷರತೆ ಪೂರಕ

ಸ್ವಾವಲಂಬನೆ, ಘನತೆಯ ಬದುಕಿಗೆ ಸಾಕ್ಷರತೆ ಪೂರಕ

ಕಲಬುರಗಿ : ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಪ್ರಮುಖವಾದ ಅಂಶವಾಗಿದ್ದು, ವ್ಯಕ್ತಿಯನ್ನು ಸಮಾಜದಲ್ಲಿ ಘನತೆ ಹಾಗೂ ಸ್ವಾವಲಂಬನೆಯಿಂದ ಬದಕಲು ಸಹಾಯ ಮಾಡುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟು,ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಶ್ರೀ ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಕ್ಷರತೆಯು ದುಃಖದಿಂದ ಭರವಸೆಗೆ ಸೇತುವೆಯಾಗಿದೆ. ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಪೂರಕವಾಗಿದೆ. ಜೀವಮಾನದ ಕಲಿಕೆಗೆ ಅಡಿಪಾಯವಾಗಿ ಸಾಕ್ಷರತೆಯ ಮಹತ್ವವನ್ನು ಉತ್ತೇಜಿಸಲು ಪ್ರತಿ ವರ್ಷ ‘ಸೆಪ್ಟೆಂಬರ್-8’ ರಂದು “ಅಂತರರಾಷ್ಟ್ರೀಯ ಸಾಕ್ಷರತಾ ದಿನ”ವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ಮೂಲಭೂತ ಓದುವಿಕೆ, ಬರವಣಿಗೆ ಮತ್ತು ಸಂಖ್ಯಾಶಾಸ್ತ್ರ ಕೌಶಲ್ಯಗಳನ್ನು ಪಡೆಯಲು ಅವಕಾಶವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವ ನಿರಂತರ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಸಾಕ್ಷರತೆ ಎಂದರೆ ಕೇವಲ ಓದುವ ಮತ್ತು ಬರೆಯುವ ಸಾಮಥ್ರ್ಯಕ್ಕಿಂತ ಹೆಚ್ಚಿನದು. ಇದು ಸ್ವತಂತ್ರ ಚಿಂತನೆ, ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳುವಿಕೆ, ಸಾಮಾಜಿಕ ಸಂಪರ್ಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೆಬ್ಬಾಗಿಲು. ಸಾಕ್ಷರರಾಗಿರುವುದು ವ್ಯಕ್ತಿಗಳು ತಮ್ಮ ಹಕ್ಕುಗಳನ್ನು ಪಡೆಯಲು, ಸಮಾಜದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ನಿವಾರಿಸಲು ಮತ್ತು ಶಾಂತಿಯುತ ಜಗತ್ತಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. 2025 ರಲ್ಲಿ ಬಹುಭಾಷಾ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮೂಲಕ, ವೈವಿಧ್ಯತೆಯ ಮೌಲ್ಯ ಮತ್ತು ಕಲಿಕೆಯಲ್ಲಿ ಸ್ಥಳೀಯ ಭಾಷೆಗಳ ಪಾತ್ರವನ್ನು ಬಲಪಡಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ, ಶಿಕ್ಷಕಿಯರಾದ ಗೀತಾಂಜಲಿ ಹಡಪದ, ಮಂಜುಳಾ ನರೋಣಾ, ಸೇವಕಿ ಸಿದ್ದಮ್ಮ ಕೌಂಟೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.