ಮೇ ೨೯ ರಿಂದ ರಾಜ್ಯದಲ್ಲಿ ಮದ್ಯದಂಗಂಡಿ ಬಂದ್

ಬೆಂಗಳೂರು, ಮೇ ೨೪- ನಿರಂತರ ದರ ಏರಿಕೆ ಮತ್ತು ಪರವಾನಗಿ ದರ ಹೆಚ್ಚಳ ವಿರೋಧಿಸಿ ಈ ತಿಂಗಳು ೨೯ ರಿಂದ ಕರ್ನಾಟಕದಾದ್ಯಂತ ಮದ್ಯದಂಗಂಡಿ ಬಂದ್ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.


ಈಗಾಗಲೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಮೂರು ಬಾರಿ ಮದ್ಯದ ದರ ಏರಿಕೆ ಮಾಡಿದೆ. ಇದರಿಂದ ಹಿಂದಿನ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಮದ್ಯ ಮಾರಾಟಗಾರರ ಸಂಘ ಸಭೆ ಕರೆದು ಸಮಾಲೋಚನೆ ನಡೆಸಿದೆ. ಮದ್ಯ ಮಾರಾಟಗಾರರು ಈ ತಿಂಗಳು ೨೯ ರಿಂದ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಕ್ಲೋಸ್ ಮಾಡಲು ತೀರ್ಮಾನ ಮಾಡಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ್ ಹೆಗ್ಡೆ ತಿಳಿಸಿದ್ದಾರೆ.


ಲೈಸೆನ್ಸ್ ದರ ಎಷ್ಟಿದೆ
ಸಿಎಲ್ ೯ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಈ ಮೊದಲು ಲೈಸೆನ್ಸ್ ಶುಲ್ಕ ೮,೬೨ ಲಕ್ಷ ಇರುವುದನ್ನು ೧೫ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸೆಸ್ ೨,೨೫ ಲಕ್ಷ ರೂ. ಸೇರಿ ಒಟ್ಟು ಒಟ್ಟು ೧೭,೨೫ ಲಕ್ಷ ರೂ. ಆಗಲಿದೆ.


ಸಿಎಲ್ ೬ಎ ಸ್ಟಾರ್ ಹೋಟೆಲ್ ಲೈಸೆನ್ಸ್ ಶುಲ್ಕ ೯,೭೫ ಲಕ್ಷ ಇದ್ದದ್ದು ಈಗ ೨೦ ಲಕ್ಷ ರೂ. ಮಾಡಲಾಗಿದೆ. ಇದಕ್ಕೆ ಸೆಸ್ ೩ ಲಕ್ಷ ರೂ. ಸೇರಿ ಒಟ್ಟು ೨೩ ಲಕ್ಷ ರೂ. ಆಗಲಿದೆ.
ಸಿಎಲ್ ೭ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಲೈಸೆನ್ಸ್ ಶುಲ್ಕ ೯,೭೫ ಲಕ್ಷ ರೂ. ಇದ್ದದ್ದು ಈಗ ೧೭ ಲಕ್ಷ ರೂ.ಗೆ ಏರಿಕೆಯಾಗಿದೆ. ಸೆಸ್ ೨,೫೫,೦೦೦ ರೂ. ಸೇರಿ ಒಟ್ಟು ೧೯,೫೫೦,೦೦ ರೂ. ಆಗಲಿದೆ.


೨೬ ರಂದು ಮದ್ಯ ಮಾರಾಟಗಾರರ ಸಂಘದ ಜೊತೆಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವೇಳೆ ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸಲಿಲ್ಲ ಅಂದರೆ ೨೯ ರಿಂದ ನಿರಂತರವಾಗಿ ಮದ್ಯದ ಅಂಗಡಿಗಳನ್ನು ಕ್ಲೋಸ್ ಮಾಡಲು ರಾಜ್ಯ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ.