ಬೀದರ:ಡಿ.೩:ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಡಿಸೆಂಬರ್ ೦೧, ಸೋಮವಾರದಂದು ಶ್ರೀ ಗೀತಾ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಭಗವದ್ಗೀತೆಯ ೧೮ ಅಧ್ಯಾಯಗಳ ೭೦೦ ಶ್ಲೋಕಗಳ ಪಾರಾಯಣ ಸಮಾರೋಪ ಈ ಸಂದರ್ಭದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಸಾನಿಧ್ಯವಹಿಸಿದ ಮೆಹೆಕರ್-ತಡೋಳಾ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ಸಂಸ್ಕಾರ ಮತ್ತು ನೀತಿಯ ಕೊರತೆಯಿರುವ ಹಾಲಿ ಶಿಕ್ಷಣ ಪದ್ಧತಿ ದೇಶದ ಸಮಗ್ರ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
“ವ್ಯಕ್ತಿತ್ವ ರೂಪಿಸಿ ರಾಷ್ಟ್ರ ನಿರ್ಮಾಣಕ್ಕೆ ಪ್ರೇರೇಪಿಸುವ ಗುರುಕುಲ ಪ್ರೇರಿತ ಭಗವದ್ಗೀತೆ ಆಧಾರಿತ ಶಿಕ್ಷಣವಷ್ಟೇ ದೇಶವನ್ನು ಬಲಿಷ್ಠ, ವಿಕಸಿತ ಮತ್ತು ಆತ್ಮನಿರ್ಭರವಾಗಿಸುತ್ತದೆ,” ಎಂದು ಅವರು ಹೇಳಿದರು. ಜಾತಿ, ಧರ್ಮ, ಭಾಷೆಗಳ ಹೆಸರಿನಲ್ಲಿ ಭಗವದ್ಗೀತೆಯನ್ನು ಸೀಮಿತಗೊಳಿಸುವುದು ದೇಶದ ದುರಂತ ಎಂದೂ ವಿಷಾದಿಸಿದರು.
ಭಗವದ್ಗೀತಾ ಅಭಿಯಾನ ಸಮಿತಿಯ ವತಿಯಿಂದ ನಡೆದ ಪಾರಾಯಣ ಕಾರ್ಯಕ್ರಮದಲ್ಲಿ ನೂರಾರು ಮಾತೆಯರು ಏಕಸ್ವರದಲ್ಲಿ ಎಲ್ಲಾ ೭೦೦ ಶ್ಲೋಕಗಳನ್ನು ಶ್ರಾವ್ಯವಾಗಿ ಪಠಿಸಿದರು. ಶ್ಲೋಕೋಚ್ಚಾರಣೆಯ ನಾದದಿಂದ ಸಂಪೂರ್ಣ ಮಂದಿರ ಮತ್ತು ಸುತ್ತಮುತ್ತಲಿನ ವಾತಾವರಣ ಆಧ್ಯಾತ್ಮಿಕತೆಯಿಂದ ತುಂಬಿತು.
ಶ್ರೀಮತಿ ಗೀತಾ ಭಟ್, ಜ್ಯೋತಿ ಕುಲಕರ್ಣಿ, ಮಂಜುಳಾ ಕುಲಕರ್ಣಿ, ನಂದಾ ಕುಲಕರ್ಣಿ, ಪ್ರಮೋದಿನಿ ಕುಲಕರ್ಣಿ ಇವರ ನೇತೃತ್ವದ ತಂಡ ಪಾಳಿಪಾಳಿ ಪಾರಾಯಣವನ್ನು ಯಶಸ್ವಿಯಾಗಿ ಮುನ್ನಡೆಸಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಗವದ್ಗೀತಾ ಸಮಿತಿಯ ಗೌರವಾಧ್ಯಕ್ಷರು ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರು, ಬೀದರದ ಭಗವದ್ಗೀತೆ ಅಭಿಯಾನ ಸಮಿತಿಯು ಗೀತಾ ಪ್ರಚಾರದ ಜೊತೆಗೆ ಶಾಲಾ ಮಕ್ಕಳಲ್ಲೂ ಜ್ಞಾನವರ್ಧನೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.

























