Home ಜಿಲ್ಲೆ ಬೆಂಗಳೂರು ಪರಿಸರ ಉಳಿದರೆ ಮಾತ್ರ ಬದುಕು ಸುಸ್ಥಿರ ಸಾಧ್ಯ

ಪರಿಸರ ಉಳಿದರೆ ಮಾತ್ರ ಬದುಕು ಸುಸ್ಥಿರ ಸಾಧ್ಯ

ಕೋಲಾರ,ಫೆ,೨೫- ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನಿಸರ್ಗ ಉಳಿದರೆ ಮಾತ್ರವೇ ನಮ್ಮ ಮುಂದಿನ ಬದುಕು ಸುಸ್ಥಿರವಾಗಿರುತ್ತದೆ ಎಂದು ಅರಾಭಿಕೊತ್ತನೂರು ಶಾಲೆ ವಿಜ್ಞಾನ ಶಿಕ್ಷಕಿ ಎಂ.ಬಿ.ಶ್ವೇತಾ ಮಕ್ಕಳಿಗೆ ಕಿವಿಮಾತು ಹೇಳಿದರು.


ತಾಲ್ಲೂಕಿನ ಮಡೇರಹಳ್ಳಿಯ ಅರಣ್ಯ ಇಲಾಖೆಯ ಸಸ್ಯೋದ್ಯಾನಕ್ಕೆ ತಾಲ್ಲೂಕಿನ ಅರಾಭಿಕೊತ್ತನೂರು ಶಾಲೆಯ ಪರಿಸರ ಕ್ಲಬ್ ವತಿಯಿಂದ ಕ್ಷೇತ್ರ ವೀಕ್ಷಣೆಗಾಗಿ ಮಕ್ಕಳನ್ನು ಕರೆತಂದು ಸಸ್ಯಗಳ ಬೆಳವಣಿಗೆ, ಗೊಬ್ಬರಗಳ ಮಹತ್ವ, ಗಿಡಮರಗಳನ್ನು ಬೆಳೆಸುವುದರಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಿ ಅವರು ಮಾತನಾಡಿದರು.


ಪರಿಸರ ಸಂರಕ್ಷಣೆ ಯಾರೋ ಮಾಡಲಿ ಎಂದು ಯೋಚಿಸುವುದು ತಪ್ಪು, ಜೀವನ ಮತ್ತು ನೆಮ್ಮದಿ ನಾಶ ತಪ್ಪಿಸಲು ಪರಿಸರ ಸಂರಕ್ಷಿಸುವ ಸಂಕಲ್ಪ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಪರಿಸರ ಎಂದರೆ ಗಿಡ,ಮರ ಮಾತ್ರವಲ್ಲ, ಭೂಮಿ, ಜೀವಿಗಳು ಎಲ್ಲವೂ ಪರಿಸರದ ಭಾಗವೇ ಎಂದರು.


ಮುಂದಿನ ಪೀಳಿಗೆಗೆ ಪರಿಸರ,ಭೂಮಿ ಉಳಿಸಲು ಪರಿಸರಮಾಲಿನ್ಯ ಮುಕ್ತ ನವಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ತಿಳಿಸಿದ ಅವರು, ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.


ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗಿ ಅದು ಭೂಮಿಯಲ್ಲಿ ಕೊಳೆಯದ ಕಾರಣ ಭೂಮಿ ಮಾಲಿನ್ಯವಾಗುತ್ತಿದೆ, ಅದನ್ನು ತಿಂದ ದನಕರು,ಪ್ರಾಣಿಗಳಿಗೂ ಮಾರಕವಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಮನೆಯಿಂದ ಹೊರ ಹೋಗುವಾಗ ಬಟ್ಟೆಯ ಕೈಚೀಲ ಬಳಸುವ ಮೂಲಕ ಪ್ಲಾಸ್ಟಿಕ್‌ಅನ್ನು ಸಾಧ್ಯವಾದಷ್ಟು ಬಳಸದಿರಲು ಪ್ರತಿಜ್ಞೆ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.


ಶಾಲೆಯ ಶಿಕ್ಷಕಿ ಕೆ.ಲೀಲಾ ಮಾತನಾಡಿ, ಶಿಸ್ತು ಇರುವೆಡೆ ಸ್ವಚ್ಚತೆಯೂ ಇರುತ್ತದೆ, ಮಕ್ಕಳಿಗೆ ಪ್ರತಿನಿತ್ಯ ಐದು ನಿಮಿಷ ಪರಿಸರದ ಪ್ರಾಮುಖ್ಯತೆ ಕುರಿತು ತಿಳಿ ಹೇಳಿದರೆ ಅವರಿಂದ ಪರಿಸರ ವೈವಿಧ್ಯತೆ ಉಳಿಸುವ ನಿಟ್ಟಿನಲ್ಲಿ ಮನಃಪರಿವರ್ತನೆಯಾಗಿ ಅವರಿಂದಲೇ ಮನೆ,ಹಳ್ಳಿಯಲ್ಲೂ ಪರಿಸರ ರಕ್ಷಣೆಗೆ ಮಾರ್ಗದರ್ಶನವಾಗುತ್ತದೆ ಆದ್ದರಿಂದ ಮಕ್ಕಳು ಶಾಲೆ,ಮನೆ,ಮನಸ್ಸು ಸ್ವಚ್ಚತೆಯ ಸಂಕಲ್ಪ ಮಾಡಬೇಕು ಎಂದರು.


ಇದೇ ಸಂದರ್ಭದಲ್ಲಿ ಮಕ್ಕಳು ಮಡೇರಹಳ್ಳಿಯ ಅರಣ್ಯ ಇಲಾಖೆಯ ಸಸ್ಯೋದ್ಯಾನದ ಆವರಣದಲ್ಲಿ ನಿಂತು ಪರಿಸರ ರಕ್ಷಣೆಗೆ ಮಾದರಿಯಾಗೋಣ ಎಂದು ತಿಳಿಸಿ ಪರಿಸರ ಜಾಗೃತಿ ಹಾಗೂ ಸಂರಕ್ಷಣೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.