Home ಜಿಲ್ಲೆ ತುಮಕೂರು ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥಕ: ನಾಗೇಂದ್ರ

ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥಕ: ನಾಗೇಂದ್ರ

ತುಮಕೂರು, ಜು.೧೦- ಸೇವೆಯ ಪ್ರಮಾಣಕ್ಕಿಂತ ಅದು ತಲುಪುವ ವ್ಯಕ್ತಿ ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮವೇ ಮುಖ್ಯವಾಗಿದೆ. ನಿಸ್ವಾರ್ಥ ಸೇವೆಯಿಂದ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೆ.ಎಸ್.ನಾಗೇಂದ್ರ ಹೇಳಿದರು.


ನಗರದ ಎಸ್‌ಎಸ್‌ಐಟಿ ಸಭಾಂಗಣದಲ್ಲಿ ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ೨೦೨೬-೨೭ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಜಿಲ್ಲಾ ಗವರ್ನರ್ ಆಗಿದ್ದ ಅವಧಿಯಲ್ಲಿ ಸ್ಥಾಪಿಸಿದ್ದ ಡಯಾಲಿಸಿಸ್ ಕೇಂದ್ರದ ಮೂಲಕ ಸಾವಿರಾರು ರೋಗಿಗಳಿಗೆ ನೆರವಾಗಿರುವುದು ತಮ್ಮ ಬದುಕಿನ ಅತ್ಯಂತ ತೃಪ್ತಿಕರ ಸೇವೆಯಾಗಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಉದ್ಯೋಗ ಕೌಶಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರೋಟರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ರೋಟರಿಯೊಂದಿಗೆ ಕೈಜೋಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.


ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ರೊ.ರಘು.ಎಸ್.ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು.


ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯಕ್ಕೆ ಗೌರವ ನೀಡಿ, ಎಲ್ಲರನ್ನು ಜತೆಯಾಗಿ ಕೊಂಡೋಯ್ಯುವ ಮೂಲಕ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಶಾ ಪ್ರಸನ್ನಕುಮಾರ್, ಯಾವುದೇ ಪ್ರತಿ ಫಲದ ನಿರೀಕ್ಷೆ ಇಲ್ಲದೆ ಮಾಡುವ ಸೇವೆಯೇ ಶ್ರೇಷ್ಠವಾದ ಸೇವೆಯಾಗಿದೆ. ರೋಟರಿ ತುಮಕೂರು ಪ್ರೇರಣಾ ಯುವ ತಂಡವಾಗಿ ಜಿಲ್ಲೆಯಾದ್ಯಂತ ಉತ್ತಮ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಈ ಸೇವಾ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದರು.


ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಯೋಗಿ ಅನೀಷ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಸವಾಲುಗಳ ಎದುರು ದೃಢವಾಗಿ ನಿಲ್ಲುವುದನ್ನು ಕಲಿಯಬೇಕು. ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಇದೇ ಸಂದರ್ಭದಲ್ಲಿ ತುಮಕೂರಿನ ಉದ್ಯಮಿ ಹಾಗೂ ಮಾಜಿ ಜಿಲ್ಲಾ ಗವರ್ನರ್ ರೊ.ಆಶಾ ಪ್ರಸನ್ನಕುಮಾರ್ ಅವರಿಗೆ ರೋಟರಿ ತುಮಕೂರು ಪ್ರೇರಣಾ ವತಿಯಿಂದ ಅಭಯಿಂದ ಸೇವಾ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೇರಣಾ ಛಾಯಾಗ್ರಾಹಕ ರತ್ನ ಪ್ರಶಸ್ತಿಯನ್ನು ರೊ.ನಾಗಭೂಷಣ್ ಎಸ್. (ನವ್ಯ ಫೋಟೋಗ್ರಾಫಿ)ಅವರಿಗೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ಗಳಾದ ರೊ.ಶ್ರೀನಿವಾಸಮೂರ್ತಿ ಜಿ., ರೊ.ಮಲ್ಲಿಕಾರ್ಜುನ ಮೆಳೇಹಳ್ಳಿ, ರೊ.ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ವಲಯ ಗವರ್ನರ್ ಪ್ರಮೀಳ ಶಿವಕುಮಾರ್, ಸಹಾಯಕ ಗವರ್ನರ್ ರೊ.ಸರೋಜಮ್ಮ, ಸಂಸ್ಥಾಪಕ ಅಧ್ಯಕ್ಷ ರೊ.ರಾಜಶೇಖರ್, ರೊ.ಶಿವಕುಮಾರ್ ಕೆ.ಜಿ, ಮಾಜಿ ವಲಯ ಗವರ್ನರ್ ರೊ.ಪ್ರಕಾಶ್ ಎಂ.ಎಸ್., ಪ್ರೇರಣಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರೊ.ಮಲ್ಲಿಕಾರ್ಜುನ ಮೆಳೇಹಳ್ಳಿ, ರೊ.ಜನಾರ್ದನ್, ರೊ.ಉಮಮಹೇಶ್, ಧನಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.