
ಕುಣಿಗಲ್, ಮಾ. ೨೮- ಸರ್ಕಾರಿ ಭೂಮಾಪಕರಂತೆ ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಹೆಚ್ಚಿನ ಭದ್ರತೆ ಕಲ್ಪಿಸಬೇಕು ಮತ್ತು ಭೂಮಾಪಕರ ನ್ಯಾಯ ಸಮ್ಮತ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನಕ್ಕೆ ತರಬೇಕು ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ವತಿಯಿಂದ ಶಾಸಕ ಹೆಚ್ ಡಿ ರಂಗನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕುಣಿಗಲ್ ತಾಲ್ಲೂಕಿನ ಪರವಾನಗಿ ಭೂಮಾಪಕರುಗಳ ಪರವಾಗಿ ರಾಜ್ಯಾದ್ಯಂತ ಪರವಾನಗಿ ಭೂಮಾಪಕರುಗಳು ತಮ್ಮ ನ್ಯಾಯ ಸಮ್ಮತ ಬೇಡಿಕೆಗಳಾದ ಒಂದು ಬಾರಿ ವಿಶೇಷ ನೇಮಕಾತಿ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗಾಗಿ ಕಳೆದ ಸುಮಾರು ಒಂದು ತಿಂಗಳಿನಿಂದ ಶಾಂತಿಯುತವಾಗಿ ಮತ್ತು ಒಗ್ಗಟ್ಟಿನಿಂದ ಮುಷ್ಕರದಲ್ಲಿ ಭಾಗವಹಿಸುತ್ತಿದ್ದೇವೆ. ನಾವು ಇಲಾಖೆಯಲ್ಲಿರುವ ಸರ್ಕಾರಿ ಭೂಮಾಪಕರಂತೆ ಸಮಾನ ಜವಾಬ್ದಾರಿಗಳೊಂದಿಗೆ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದರೂ, ನಮಗೆ ತಕ್ಕಮಟ್ಟದ ವೇತನ ಹಾಗೂ ಭದ್ರತೆ ಇಲ್ಲದಿರುವುದು ನಮ್ಮ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.
ಈ ಸಮಸ್ಯೆಯನ್ನು ಹಲವು ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರು ಸಹ ಇದುವರೆಗೂ ಯಾವುದೇ ಶಾಶ್ವತ ಪರಿಹಾರ ನಮಗೆ ದೊರಕಿರುವುದಿಲ್ಲ. ಈ ಹೋರಾಟವು ಯಾರ ವಿರುದ್ಧವೂ ಅಲ್ಲ ನಮ್ಮ ವೃತ್ತಿಯ ಗೌರವ ಮತ್ತು ಜೀವನ ಭದ್ರತೆಗಾಗಿ ನಡೆಯುತ್ತಿರುವ ನ್ಯಾಯ ಸಮ್ಮತ ಹೋರಾಟವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ನಾವು ಮನಗಂಡಿದ್ದೇವೆ. ೪.೬೪ ಲಕ್ಷ ಅರ್ಜಿಗಳು ವಿಲೇವಾರಿ ಆಗಿರುವುದಿಲ್ಲ, ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ, ಆದ್ದರಿಂದ ಈ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಾಶ್ವತ ಪರಿಹಾರ ಸಿಗುವವರೆಗೂ ನಾವು ಈ ಹೋರಾಟವನ್ನು ಮುಂದುವರಿಸುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ತಾವುಗಳು ದಯವಿಟ್ಟು ಪರವಾನಗಿ ಭೂಮಾಪಕರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ನಮ್ಮ ನ್ಯಾಯ ಸಮ್ಮತ ಬೇಡಿಕೆಗಳ ಕುರಿತು, ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುಬೇಕು. ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಹಾಗೂ ನಿಮ್ಮ ಹಸ್ತಕ್ಷೇಪದಿಂದ ನಮ್ಮ ಮನಸ್ಸಿಗೆ ನ್ಯಾಯ ದೊರೆಯುತ್ತದೆ ಎಂಬ ಆತ್ಮ ವಿಶ್ವಾಸವನ್ನು ಇಟ್ಟುಕೊಂಡಿದ್ದೇವೆ ಎಂದು ಶಾಸಕ ಹೆಚ್ ಡಿ ರಂಗನಾಥ್ ರವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸುಮಾರು ೨೦ ವರ್ಷಗಳಿಂದ ನೇಮಕಾತಿ ಮಾಡಬೇಕು ಎಂದು ಸಾಕಷ್ಟು ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೊಟ್ಟ ಮಾತನ್ನೇ ಮರೆತಿದ್ದಾರೆ. ಒಂದು ವರ್ಷ ಕಳೆದರೂ ಇನ್ನೂ ಸಹ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಸಿಗುವಂತಹ ಎಲ್ಲ ಅನುಕೂಲತೆಗಳನ್ನು ನಮಗೂ ನೀಡಬೇಕು ಎಂದು ಎಷ್ಟು ಕೂಗಿ ಹೋರಾಟ ಮಾಡಿದರು ಸಹ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ. ಸರ್ಕಾರಿ ಭೂಮಾಪಕರಂತೆ ನಾವು ಕೂಡಾ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೆ ಅವರಿಗೊಂದು ನ್ಯಾಯ ನಮಗೆ ಒಂದು ನ್ಯಾಯ ತೋರುತ್ತಿರುವುದು ಯಾವುದೇ ರೀತಿ ಸರಿಯಲ್ಲ ಎಂದು ಆರೋಪಿಸಿದರು.

























