Home ಜಿಲ್ಲೆ ಬೆಂಗಳೂರು ತಂಬಾಕು ಮಾರಾಟಕ್ಕೆ ಪರವಾನಿಗೆ ಕಡ್ಡಾಯ

ತಂಬಾಕು ಮಾರಾಟಕ್ಕೆ ಪರವಾನಿಗೆ ಕಡ್ಡಾಯ

ಕೋಲಾರ, ಅ. ೧೩: ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ಕೆ.ಜಿ.ಎಫ್ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಅಧಿಕಾರಿಗಳು ಮತ್ತು ನಗರಸಭೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಕೆ.ಜಿ.ಎಫ್ ನಗರಸಭೆ ವ್ಯಾಪ್ತಿಯ ಅಂಡ್ರಸನ್‌ಪೇಟೆಯಲ್ಲಿ ಕೋಟ್ಪ್ ಕಾಯ್ದೆ (ಅದು ೨೦೦೩) ಉಲ್ಲಂಘನೆಯ ವಿರುದ್ಧ ದಾಳಿ ನಡೆಸಿದರು. ಈ ದಾಳಿಯಲ್ಲಿ, ಕೋಟ್ಪ್ ಕಾಯ್ದೆಯ ಸೆಕ್ಷನ್ ೪ ಮತ್ತು ೬ರಡಿ ೧೨ ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಸಾರ್ವಜನಿಕರಿಗೆ ಕೋಟ್ಪ್ ಕಾಯ್ದೆಯ ನಿಯಮಾವಳಿಗಳು ಮತ್ತು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲಾಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ನೋಡಲ್ ಅಧಿಕಾರಿಗಳಾದ ಡಾ. ಜಗದೀಶ್ ಎಂ. ಅವರು ಜಾಗೃತಿ ಮೂಡಿಸಿದರು.


ಈ ಸಂದರ್ಭದಲ್ಲಿ ಅವರು ಮಾತನಾಡಿ, ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಪಾನ್ ಮಸಾಲ, ಹನ್ಸ್, ಜರ್ದಾ ಮುಂತಾದವುಗಳನ್ನು ಮಾರಾಟ ಮಾಡಲು ಇನ್ನು ಮುಂದೇ ತಂಬಾಕು ಮಾರಾಟ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕಿದೆ. ಇತ್ತೀಚೆಗೆ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ತಂಬಾಕು ಮಾರಾಟ ಪರವಾನಿಗೆ ನೀತಿಯನ್ನು ಜಾರಿಗೆ ತಂದಿದ್ದು, ದೃಢಪಡಿಸಲಾಯಿತು ಎಂದು ತಿಳಿಸಿದರು.


ಪರವಾನಿಗೆ ಪಡೆಯುವ ವಿಧಾನ: ನಿಗಧಿತ ನಮೂನೆಯಲ್ಲಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ತಪಾಸಣೆಗೆ ಬಂದಾಗ ಸಂಪೂರ್ಣ ಸಹಕಾರ ನೀಡಬೇಕು. ಕೋಟ್ಪ್ ಕಾಯ್ದೆಯ ಅನುಸಾರ ನಿಗಧಿತ ಸೈನೇಜ್ ಬೋರ್ಡುಗಳನ್ನು ಪ್ರದರ್ಶಿಸಬೇಕು. ಕೊಟ್ಟಾ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕಿದೆ. ತಂಬಾಕು ಮಾರಾಟ ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ದಂಡ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.


ನಗರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ರೂ ೪,೦೦೦ ದಂಡವನ್ನು ವಿಧಿಸಲಾಗುತ್ತದೆ. ಮಾರಾಟ ಮುಂದುವರಿದರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪುರಸಭೆ ಮತ್ತು ಪಟ್ಟಣಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಇಂತಹ ಮಾರಾಟ ಸಂಭವಿಸಿದರೆ ರೂ ೩,೦೦೦ ದಂಡವನ್ನು ವಿಧಿಸಲಾಗುತ್ತದೆ, ಮಾರಾಟ ಮುಂದುವರಿದರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.


ಈ ವಿಶೇಷ ದಾಳಿಯಲ್ಲಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಜಗದೀಶ್ ಎಂ., ಕೆ.ಜಿ.ಎಫ್ ನಗರಸಭೆಯ ಆರೋಗ್ಯ ನಿರೀಕ್ಷಣಾಧಿಕಾರಿ ಗೌರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸನ್ನ ಕುಮಾರ್, ರಮೇಶ್, ಜಿತೇಂದ್ರ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಮಹಮದ್.ಪಿ, ಮಂಜುನಾಥ್ ಜಿ. ಎನ್, ಪೊಲೀಸ್ ಪೇದೆ ರಾಜೇಂದ್ರ ಮತ್ತಿತರರು ಭಾಗವಹಿಸಿದ್ದರು.