
ಕೊರಟಗೆರೆ, ಡಿ.೧೮- ನಮ್ಮ ದೇಶಕ್ಕೆ ಅಪಾರ ಹೆಮ್ಮೆ ಮತ್ತು ಗೌರವದ ದಿನವಾದ ವಿಜಯ್ ದಿವಸ್‌ನ್ನು ಆಚರಿಸುತ್ತಿದ್ದೇವೆ. ಡಿಸೆಂಬರ್ ೧೬, ೧೯೭೧ ರಂದು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ಐತಿಹಾಸಿಕ ವಿಜಯ ಸಾಧಿಸಿದವು, ಇದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು. ಈ ಗೆಲುವು ನ್ಯಾಯ ಮತ್ತು ಮಾನವೀಯತೆಗಾಗಿ ಹೋರಾಡಿದ ನಮ್ಮ ಸೈನಿಕರ ಶೌರ್ಯ, ತ್ಯಾಗ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ವಡ್ಡಗೆರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಘುನಂದನ್ ಹೇಳಿದರು.
ತಾಲ್ಲೂಕಿನ ವಡ್ಡಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮೈ ಭಾರತ್ ಮೇರಾ ಯುವ ಭಾರತ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಗರುಗದೊಡ್ಡಿ ಸಂಯುಕ್ತಾಶ್ರಯದಲ್ಲಿ ವಿಜಯ್ ದಿವಸ್-೨೦೨೫-೨೬ ಅಂಗವಾಗಿ ಏರ್ಪಡಿಸಿದ್ದ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸೋಣ. ವಿಜಯ್ ದಿವಸ್ ಏಕತೆ, ಶಾಂತಿ ಮತ್ತು ದೇಶಭಕ್ತಿಯನ್ನು ಎತ್ತಿ ಹಿಡಿಯುವ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಬಲಿಷ್ಠ, ಏಕೀಕೃತ ಭಾರತಕ್ಕಾಗಿ ಕೆಲಸ ಮಾಡಲು ನಾವು ಪ್ರತಿಜ್ಞೆ ಮಾಡೋಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗರುಗದೊಡ್ಡಿ ಗ್ರಾಮೀಣ ಮಾಹಿತಿ ತಂತ್ರಜ್ಞಾನ ಕೇಂದ್ರದ ಅಧ್ಯಕ್ಷ ಜಿ.ವಿ.ನಾಗೇಂದ್ರಕುಮಾರ್, ಪ್ರತಿ ವರ್ಷ ವಿಜಯ್ ದಿವಸ್‌ನ್ನು ದೇಶ ಭಕ್ತಿಯಿಂದ ಆಚರಿಸಲಾಗುತ್ತದೆ. ನಮ್ಮ ದೇಶದ ಸಾರ್ವಭೌಮತ್ವ ಮತ್ತು ಘನತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಸೈನಿಕರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ ವಿಜಯ್ ದಿವಸ್ ಕೇವಲ ಯುದ್ಧದ ವಿಜಯೋತ್ಸವವಲ್ಲ, ಬದಲಿಗೆ ಧರ್ಮ, ಮಾನವೀಯತೆ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಭಾರತೀಯ ಸೈನಿಕರು ತೋರಿದ ಅಸಾಧಾರಣ ಬಲಿದಾನ ಮತ್ತು ಶೌರ್ಯದ ಸಂಕೇತವಾಗಿದೆ. ೧೯೭೧ರ ಯುದ್ಧಕ್ಕೆ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ನಡೆಯುತ್ತಿದ್ದ ನರಮೇಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮುಖ್ಯ ಕಾರಣವಾಗಿತ್ತು. ಅಲ್ಲಿನ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ವಲಸೆ ಬಂದಾಗ, ಭಾರತವು ಮಾನವೀಯ ನೆಲೆಯಲ್ಲಿ ಮಧ್ಯ ಪ್ರವೇಶಿಸಿತು. ಕೇವಲ ೧೩ ದಿನಗಳ ಹೋರಾಟದ ನಂತರ, ಡಿಸೆಂಬರ್ ೧೬, ೧೯೭೧ ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎ.ಎ.ಕೆ.ನಿಯಾಜಿ ಅವರು ೯೩೦೦೦ಕ್ಕೂ ಹೆಚ್ಚು ಸೈನಿಕರೊಂದಿಗೆ ಢಾಕಾದಲ್ಲಿ ಭಾರತೀಯ ಸೇನೆಯ ಜಂಟಿ ಪಡೆಗಳ ಮುಂದೆ ಶರಣಾದರು ಎಂದು ವಿವರಿಸಿದರು.
ವಡ್ಡಗೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆನಂದಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಶಿಸ್ತು ಮತ್ತು ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸುಂದರವಾಗಿರುತ್ತದೆ. ಇಂತಹ ಕಾರ್ಯಕ್ರಮ ಇದಕ್ಕೆ ಪೂರಕವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು.
ನಮ್ಮ ದೇಶ ನಮ್ಮ ಹೆಮ್ಮೆ ಸದಾ ನಾವು ದೇಶಪ್ರೇಮಿಗಳಾಗಿಯೇ ಬದುಕಿದಾಗ ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ. ಆಗ ಈ ರೀತಿಯ ಕಾರ್ಯಕ್ರಮಕ್ಕೆ ಅರ್ಥ ಬರಲು ಸಾಧ್ಯ ಎಂದು ಹೇಳಿದರು.
ವಡ್ಡಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕಿ ಹೆಚ್.ಮಂಜುಳ ಮಾತನಾಡಿ, ವಿಜಯ್ ದಿವಸ್ ಕೇವಲ ಹಬ್ಬವಲ್ಲ, ಇದು ಯುವ ಪೀಳಿಗೆಗೆ ರಾಷ್ಟ್ರಪ್ರೇಮ, ತ್ಯಾಗ ಮತ್ತು ಕರ್ತವ್ಯದ ಮಹತ್ವವನ್ನು ತಿಳಿಸುವ ದಿನವಾಗಿದೆ. ದೇಶದ ಗಡಿಗಳನ್ನು ರಕ್ಷಿಸಲು ಮತ್ತು ಶಾಂತಿ ನೆಲೆಸಲು ತಮ್ಮ- ಜೀವಗಳನ್ನು ಲೆಕ್ಕಿಸದೆ ಹೋರಾಡಿದ ಪ್ರತಿಯೊಬ್ಬ ಸೈನಿಕನಿಗೆ ಭಾರತೀಯರೆಲ್ಲರೂ ಈ ದಿನದಂದು ಕೃತಜ್ಞತೆ ಸಲ್ಲಿಸುತ್ತಾರೆ. ಈ ದಿನದ ಮಹತ್ವದ ಬಗ್ಗೆ ಯುವ ಪೀಳಿಗೆಗೆ ಶಿಕ್ಷಣ ನೀಡಲು ಶಾಲೆಗಳು, ಕಾಲೇಜುಗಳು ಮತ್ತು ಸಮುದಾಯಗಳು ಕಾರ್ಯಕ್ರಮಗಳು, ಭಾಷಣಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸುತ್ತವೆ ಎಂದು ತಿಳಿಸಿದರು.
ಜಿ.ವಿ.ವೀರೇಂದ್ರಪ್ರಸಾದ್ ಮಾತನಾಡಿ, ವಿಜಯ್ ದಿವಸ್ ಅಂಗವಾಗಿ ವಡ್ಡಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ದೇಶಭಕ್ತಿ ಗೀತೆಗಳ ಗಾಯನವನ್ನು ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು ಎಂದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘುನಂದನ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆನಂದ ಗುಂಡಾರಿ, ಜಿ.ಟಿ.ವೆಂಕಟೇಶ್, ವಿನಯ್, ಜಿ.ವಿ.ವೀರೇಂದ್ರ ಪ್ರಸಾದ್, ರಾಮಕೃಷ್ಣಯ್ಯ ಗರುಗದೊಡ್ಡಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಭಾಗವಹಿಸಿದ್ದರು.




























