Home ಜಿಲ್ಲೆ ಜಿಲ್ಲೆಯ ಅಭಿವೃದ್ಧಿ, ಗೌರವ ಹೆಚ್ಚಿಸಲು ಕೂಡಿ ಕೆಲಸ ಮಾಡೋಣ

ಜಿಲ್ಲೆಯ ಅಭಿವೃದ್ಧಿ, ಗೌರವ ಹೆಚ್ಚಿಸಲು ಕೂಡಿ ಕೆಲಸ ಮಾಡೋಣ

ಧಾರವಾಡ, ಫೆ.13: ರಾಜ್ಯದಲ್ಲಿ ಧಾರವಾಡ ಜಿಲ್ಲೆಗೆ ವಿಶೇಷವಾದ ಸ್ಥಾನ ಹಾಗೂ ಗುರುತಿಸುವಿಕೆ ಇದೆ. ಇಲ್ಲಿನ ಸಾಹಿತ್ಯ, ಸಂಗೀತ, ಶಿಕ್ಷಣ ಮತ್ತು ಚಿತ್ರಕಲೆಗಳು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಗಳಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸಲು ಎಲ್ಲ ಸರ್ಕಾರಿ ನೌಕರರು ಕೂಡಿ ಕೆಲಸ ಮಾಡೋಣ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಮಯಪಾಲನೆಗೆ ಆದ್ಯತೆ ನೀಡಬೇಕು ಎಂದು ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.


ಅವರು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಪರಿಚಯಾತ್ಮಕ ಸಭೆ ಜರುಗಿಸಿ, ಇಲಾಖೆಗಳ ಮಾಹಿತಿ ಪಡೆದು, ಮಾತನಾಡಿದರು.


ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ನಮ್ಮ ವೈಯಕ್ತಿಕ ಕಾರಣಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ನಾಗರಿಕರ ಬೇಡಿಕೆ, ಸಮಸ್ಯೆಗಳ ಕುರಿತು ಕ್ಷೇತ್ರ ಮಟ್ಟದಲ್ಲಿ, ತಾಲೂಕಾಮಟ್ಟದಲ್ಲಿ ಆಲಿಸಿ, ತಮ್ಮ ಹಂತದಲ್ಲಿ ಸಾಧ್ಯವಾದರೆ, ಅಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಯಾವುದೇ ವ್ಯಕ್ತಿಗಳನ್ನು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸಬಾರದು. ಸರ್ಕಾರವು ಅನೇಕ ಇಲಾಖೆಗಳ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರ ಮನೆಬಾಗಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ ಎಂದು ಅವರು ಹೇಳಿದರು.


ಜನಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿ ಸಾರ್ವಜನಿಕರಿಗೆ ತಲುಪಿಸಲು ರಾಜ್ಯ ಸರ್ಕಾರವು ತಾಂತ್ರಿಕವಾಗಿ ಸಾಕಷ್ಟು ಅವಕಾಶಗಳನ್ನು ನೀಡಿದೆ. ಅದಾಗ್ಯೂ ಸಾರ್ವಜನಿಕರಿಗೆ ಸರ್ಕಾರಿ ಸೇವೆ ನೀಡುವಲ್ಲಿ ಅನಗತ್ಯವಾಗಿ ವಿಳಂಬ, ಉದಾಸೀನತೆ ಮತ್ತು ಕರ್ತವ್ಯ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇಂತಹ ದೂರುಗಳು ಬಂದಲ್ಲಿ, ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ, ಕ್ರಮಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.


ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ತಮ್ಮ ವೃತ್ತಿ ನಿರ್ವಹಿಸುವಲ್ಲಿ ಉಂಟಾಗುವ ಅನಾನುಕೂಲತೆ, ಸಮಸ್ಯೆಗಳು ಇದ್ದಲ್ಲಿ, ಅಥವಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆ ಸೂಚನೆಗಳಿದ್ದಲ್ಲಿ ನನ್ನೊಂದಿಗೆ ಹಂಚಿಕೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಮುಕ್ತವಾಗಿದೆ. ಎಲ್ಲರೂ ತಮ್ಮ ಜವಾಬ್ದಾರಿ ಹಾಗೂ ಹೋಣೆಗಾರಿಕೆಗಳನ್ನು ಅರಿತು ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕೆಂದು ನೂತನ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸೂಚಿಸಿದರು.


ಜಿಲ್ಲೆಯ ಪ್ರತಿ ಇಲಾಖೆಯು ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸರ್ಕಾರ ನಿಗದಿ ಪಡಿಸಿರುವ ಅವಧಿಯೊಳಗೆ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ತಪ್ಪದೇ ನೀಡಬೇಕು. ವೈಯಕ್ತಿಕ ಕಾರಣಗಳಾಗಲಿ ಅಥವಾ ಕಚೇರಿ ಮಟ್ಟದ ಕೊರತೆಗಳಾಗಲಿ ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಉಂಟಾಗಬಾರದು ಎಂದು ಹೇಳಿದರು.


ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ಸಮಯಕ್ಕೆ ಸರಿಯಾಗಿ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲಾ ಅಧಿಕಾರಿಗಳು ಕ್ರಿಯಾಶೀಲರಾಗಿದ್ದಿರಿ. ಆದ್ದರಿಂದ ಕಾರ್ಯಕ್ಷಮತೆಯನ್ನು ತೋರಿಸಿ, ಸೇವೆಗಳನ್ನು ಸಮಯಕ್ಕೆ ಒದಗಿಸಿ ಎಂದು ಅವರು ತಿಳಿಸಿದರು.


ತುರ್ತು ಕಡತಗಳು ಅಥವಾ ಅನುಮೋದನೆಗಳ ವಿಷಯದಲ್ಲಿ ಅಧಿಕಾರಿಗಳು ನೇರವಾಗಿ ತಮ್ಮ ಕಚೇರಿಗೆ ಬರಬಹುದು. ಅಧಿಕಾರಿಗಳು ಯಾವುದೇ ಸಮಯದಲ್ಲಾದರೂ ನೇರವಾಗಿ ಭೇಟಿ ಮಾಡಬಹುದು. ತುರ್ತು ವಿಷಯಗಳಿಗೆ ತಕ್ಷಣ ಪ್ರವೇಶ ಕಲ್ಪಿಸಿದೆ. ಸಾರ್ವಜನಿಕರ ಭೇಟಿಗಾಗಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಅವಕಾಶವಿದೆ ಎಂದು ಹೇಳಿದರು.


ಫೈಲ್‍ಗಳು ಬಾಕಿ ಉಳಿಯುವುದು, ಅನುಮೋದನೆ ವಿಳಂಬವಾಗುವುದು ಇತ್ಯಾದಿ ಕಾರಣಗಳಿಂದ ಯಾವುದೇ ಕೆಲಸ ತಡವಾಗಬಾರದು. ಸರ್ಕಾರದ ಸೇವೆಗಳನ್ನು ಜನರಿಗೆ ಸಮರ್ಪಕವಾಗಿ ಒದಗಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು.


ಸರ್ಕಾರಿ ಕೆಲಸಗಳಲ್ಲಿ ವಿಳಂಬವಾಗಬಾರದು. ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಾನು ಈಗಾಗಲೇ ಕೆಲಸ ಪ್ರಾರಂಭಿಸಿದ್ದೇನೆ. ನಮ್ಮ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಒಳ್ಳೆಯ ತಂಡದ ಮನೋಭಾವ ಬೆಳೆಸಿ, ಜನರಿಗೆ ಉತ್ತಮ ಸೇವೆ ನೀಡೋಣ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶೇಖ ಅಬ್ದುಲ್ ಅಲಿಂ ಸಿದ್ದಕಿ, ಪ್ರೋಬೆಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು.


ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಪಾದ ಕುಲಕರ್ಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಾನುಮತಿ ಎಚ್., ಪಂಚಾಯತ್ ರಾಜ್ ಮತ್ತು ಇಂಜಿನೀಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ಆರ್.ಎಮ್.ಸೊಪ್ಪಿಮಠ, ಪಶು ಪಾಲನೆ ಮತ್ತು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಎಸ್.ವಿ.ಸಂತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್. ಹೊನಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪೂರ್ಣಿಮಾ ಚೂರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.