ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆ ಮಾಡೋಣ: ಶಂಕರಗೌಡ ಬಿರಾದಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೯:ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಮೂಲಕ ಪರಿಸರವನ್ನು ಕಲುಷಿತಗೊಳಿಸದೆ ಗಿಡಮರಗಳನ್ನು ಬೆಳೆಸುವ ಮೂಲಕ ವಿಶ್ವ ಪರಿಸರ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸೋಣ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ವಿದ್ಯಾನಗರದ ಉದ್ಯಾನವನದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.
ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆAದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಗಳವರೆಗೂ ಹೀಗೆಯೂ ಉಳಿಯಬೇಕಿದೆ ಎಂದರು.
ಬೇಸರವೆAದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಬಹಳ ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸುವ ಯೋಚನೆಯೊಂದಿಗೆ ಬಂದಿತು. ಪರಿಸರ ಸಂರಕ್ಷಣೆಗೆ ನಾಗರಿಕರನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲೆ ಸ್ಪರ್ಧೆಗಳು, ರಸಪ್ರಶ್ನೆ ಸ್ಪರ್ಧೆಗಳು, ಕಲಾ ಪ್ರದರ್ಶನಗಳು, ಪ್ರಬಂಧ ಬರವಣಿಗೆ, ಭಾಷಣ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಪ್ರತಿ ವರ್ಷ ಜೂನ್ ೫ ರಂದು ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್‌ನೊಂದಿಗೆ ಆಚರಿಸುತ್ತಾ ಬರಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹಲವು ಕಾರಣಗಳಿಂದ ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದು ನಿಲ್ಲಬೇಕು ಎಂದರು.
ರಾಷ್ಟ್ರೀಯ ಬಸವಸೈನ್ಯ ಸಂಘಟನೆ ಎರಡು ದಶಕಗಳಿಂದ ಪಟ್ಟಣದ ವಿವಿಧ ಬಡಾವಣೆಯ ಉದ್ಯಾನವನಗಳಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ ಮಾತನಾಡಿ, ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಧ್ಯೇಯವಾಕ್ಯದ ಉದ್ದೇಶ ಪರಿಸರದ ಬಗ್ಗೆ ಪ್ರತಿ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವುದಾಗಿದೆ. ೨೦೨೫ರ ಧ್ಯೇಯ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು’ ಎಂದಾಗಿದೆ. ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ, ವಿಲೇವಾರಿ ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಪ್ರಶಾಂತ ಮುಂಜಾನೆ, ಸುನಿಲ ಚಿಕ್ಕೊಂಡ, ಸಂಜು ಬಿರಾದಾರ, ಶಂಕರಗುರು ರಜಪೂತ್, ಆನಂದ ವನರೊಟ್ಟಿ, ಸಂಗಮೇಶ ಜಾಲಗೇರಿ, ಶಿವಾನಂದ ಆಲ್ಗೂರ, ಅಶೋಕ ತಾಳಿಕೋಟಿ, ಎಸ್.ಜಿ. ಹೊರ್ತಿ, ಮಹಾದೇವಿ ಕನಮಡಿ, ಪಾರ್ವತಿ ಕೊಟ್ರಶೆಟ್ಟಿ, ಡಾ. ಸೌಭಾಗ್ಯ ಹಾವಿನಾಳ, ಅನುಜಾ ಗಬ್ಬಾ, ಜಯಾ ಗುಡೂರು, ಪಾರ್ವತಿ ಬಿರಾದಾರ, ವಿಜಯಾ ತಾಳಿಕೋಟಿ, ಸರು ಆಲ್ಗೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.