ನವ್ಹೆಂಬರ್ ಕನ್ನಡಿಗರಾಗದೆ, ನಿತ್ಯ ಕನ್ನಡಿಗರಾಗೋಣ

ಕಲಬುರಗಿ : ನ.4: ಕನ್ನಡ ಕಟ್ಟುವ ಕಾರ್ಯ ನಿರಂತರವಾಗಿ ಜರುಗಬೇಕು. ಕನ್ನಡ ಕಟ್ಟುವ ಕಾರ್ಯ ಎಲ್ಲರು ಮಾಡಬೇಕು ಮತ್ತು ಇದು ನಿರಂತರವಾಗಿರಬೇಕು. ಕನ್ನಡ ಕಟ್ಟಿದ ವೀರ ಕನ್ನಡಿಗರ ಶ್ರಮ ಮರೆಯಬಾರದು. ಎಲ್ಲರಲ್ಲಿ ಕನ್ನಡದ ಬಗ್ಗೆ ಗೌರವ, ಸ್ವಾಭಿಮಾನ ಮೂಡಲಿ. ಕನ್ನಡವು ನವೆಂಬರ್ ಮಾತ್ರ ಸೀಮಿತಗೊಳಿಸದೆ, ನಿತ್ಯ ಕನ್ನಡಿಗರಾಗೋಣ ಎಂದು ಶಹಾಬಾದ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮರಲಿಂಗ ಯಾದಗಿರಿ ಮಾರ್ಮಿಕವಾಗಿ ಹೇಳಿದರು.
ಶಹಾಬಾದ ತಾಲೂಕಿನ ಭಂಕೂರಿನ ಸ್ಪರ್ಧಾ ಸ್ಪೂರ್ತಿ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ “ರಾಜ್ಯೋತ್ಸವ ಮಾಸಾಚರಣೆಯ ಸರಣಿ ಉಪನ್ಯಾಸ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ನಾಡಿನಲ್ಲಿರುವ ಎಲ್ಲರೂ ಜಾತಿ, ಧರ್ಮ, ಪ್ರದೇಶ ಮೀರಿ ನಾವೆಲ್ಲರೂ ಕನ್ನಡಿಗರು ಒಂದೇ ಎಂಬ ಮನೋಭಾವ ಮೈಗೂಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕನ್ನಡದ ಬಗ್ಗೆ ಅಭಿಮಾನ ಶೂನ್ಯರಾಗದೆ, ನಾಡು-ನುಡಿಯ ಬಗ್ಗೆ ಅಪಾರವಾದ ಗೌರವ, ಸ್ವಾಭಿಮಾನ ಬೆಳೆಸಿಕೊಂಡು ಕನ್ನಡದ ಸೇವೆ ಮಾಡಬೇಕು ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಕನ್ನಡದಲ್ಲಿ ಬರೆಯುವ, ಓದುವ, ಮಾತನಾಡುವ ಕನ್ನಡತ ಪ್ರವೃತ್ತಿ ಅಳವಡಿಕೊಳ್ಳಬೇಕು. ಕನ್ನಡ ನಮ್ಮ ತಾಯಿ ಭಾಷೆಯಾಗಿದ್ದು, ಅದನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತಾಗುತ್ತದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಕನ್ನಡ ನಾಡಿನ ಕೊಡುಗೆ ಅಪಾರವಾಗಿದೆ. ಕನ್ನಡ ನಾಡು-ನುಡಿಯ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ನಮ್ಮ ಬಳಗದಿಂದ ಇಡೀ ತಿಂಗಳು ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹೇಶ್ ಧರಿ, ಉಪನ್ಯಾಸಕ ಶಶಿಕಾಂತ ಮಾಡಿವಾಳ, ಸಮಾಜ ಸೇವಕರಾದ ಚಂದ್ರಕಾಂತ ಮಡಿವಾಳ, ಶಾಲೆಯ ಮುಖ್ಯ ಶಿಕ್ಷಕಿ ಕವಿತಾ ಜಾಧವ, ಶಿಕ್ಷಕಯರಾದ ಯೇಸುನಾಥ ಹುಲಿಯರ್, ನಾಗರತ್ನ ಮಠಪತಿ, ಮಲ್ಲಮ್ಮ, ಸೇವಕಿ ನೀಲಮ್ಮ ವಗ್ಗನ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು