Home ಜಿಲ್ಲೆ ಕಲಬುರಗಿ ವಿಜ್ಞಾನ ಕ್ಷೇತ್ರದಲ್ಲಿನ ಮಹಿಳೆಯರ ಪ್ರಮಾಣ ಹೆಚ್ಚಾಗಲಿ

ವಿಜ್ಞಾನ ಕ್ಷೇತ್ರದಲ್ಲಿನ ಮಹಿಳೆಯರ ಪ್ರಮಾಣ ಹೆಚ್ಚಾಗಲಿ

ಕಲಬುರಗಿ :ಫೆ.11: ವಿಶ್ವಾದ್ಯಂತ ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿನ ಮಹಿಳೆಯರ ಪ್ರಾತಿನಿಧ್ಯವು 35% ಕ್ಕಿಂತ ಕಡಿಮೆ ಇದೆ. ಟೆಸ್ಸಿ ಥಾಮಸ್ (ಮಿಸೈಲ್ ವುಮನ್), ಗಗನ್‍ದೀಪ್ ಕಾಂಗ್ (ಸೂಕ್ಷ್ಮ ಜೀವಶಾಸ್ತ್ರಜ್ಞೆ) ರಂತಹ ವಿಜ್ಞಾನಿಗಳು ಭಾರತದ ಹೆಮ್ಮೆಯಾಗಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿನ ಮಹಿಳೆಯರ ಪ್ರಮಾಣ ಹೆಚ್ಚಾಗಬೇಕಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ನಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಜ್ಞಾನ ಕ್ಷೇತ್ರದ ಮಹಿಳೆಯರ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಈ ದಿನವು ಮಹಿಳೆಯರು ಮತ್ತು ಹುಡುಗಿಯರು ವಿಜ್ಞಾನದ ನಾಯಕತ್ವದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಒತ್ತಿಹೇಳುತ್ತದೆ. ವಿಜ್ಞಾನದಲ್ಲಿ ಮಹಿಳೆಯರ ಅನೇಕ ಕ್ರಾಂತಿಕಾರಿ ಕೊಡುಗೆಗಳನ್ನು ಕಡೆಗಣಿಸಲಾಗಿದೆ. ರೊಸಾಲಿಂಡ್ ಫ್ರಾಂಕ್ಲಿನ್ ಡಿಎನ್‍ಎ ರಚನೆಯನ್ನು ಕಂಡುಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರಸಾಯನಶಾಸ್ತ್ರಜ್ಞೆ. ಅವರ ಪ್ರಮುಖ ಪಾತ್ರದ ಹೊರತಾಗಿಯೂ, ಮನ್ನಣೆ ಮರಣೋತ್ತರವಾಗಿ ಮಾತ್ರ ಬಂದಿತು ಎಂಬುದು ವಿಷದನೀಯ ಸಂಗತಿಯಾಗಿದೆ ಎಂದರು. ಶಿಕ್ಷಕಿ ಪೂಜಾ ಹೂಗಾರ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಬಳಗದ ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಕಾವೇರಿ ಹೌದೆ ಹಾಗೂ ವಿದ್ಯಾರ್ಥಿಗಳು ಇದ್ದರು.