Home ಜಿಲ್ಲೆ ಸಮಾಜದ ಏಳಿಗೆಗಾಗಿ ರಾಜಕೀಯ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ : ರಾಚಣ್ಣಗೌಡ ಮುದ್ನಾಳ

ಸಮಾಜದ ಏಳಿಗೆಗಾಗಿ ರಾಜಕೀಯ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ : ರಾಚಣ್ಣಗೌಡ ಮುದ್ನಾಳ

ಯಾದಗಿರಿ :ಮೇ.೧೮:”ಒಗ್ಗಟ್ಟಿನಲ್ಲಿ ಅಪಾರ ಶಕ್ತಿ ಅಡಗಿದೆ. ಸಮಾಜದ ಅಭಿವೃದ್ಧಿ ಮತ್ತು ಭವಿಷ್ಯದ ವಿಚಾರ ಬಂದಾಗ ರಾಜಕೀಯ, ವೈಯಕ್ತಿಕ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಂದೇ ವೇದಿಕೆಯಲ್ಲಿ ನಿಂತು ಶ್ರಮಿಸಬೇಕು” ಎಂದು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಉದ್ಯಮಿ ರಾಚಣ್ಣಗೌಡ ಮುದ್ನಾಳ ಕರೆ ನೀಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕ, ತಾಲೂಕು ಘಟಕ, ತಾಲೂಕು ಯುವ ಘಟಕ ಹಾಗೂ ವೀರಶೈವ ಸಮಾಜದ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವ ಘಟಕ ತನ್ನ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಗೆ ವಿಶೇಷ ಪ್ರಾಧಾನ್ಯತೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ಸಾಹಿ ಯುವ ನಾಯಕ ಮಹೇಶರೆಡ್ಡಿ ಮುದ್ನಾಳ ಅವರನ್ನು ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಹಾಗೂ ಮಲ್ಲಿಕಾರ್ಜುನ ಅರುಣಿ, ಸುನೀಲಕುಮಾರ ವಾರದ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ಜಿಲ್ಲೆಯ ಸಮಾಜಕ್ಕೆ ಹೊಸ ಶಕ್ತಿ ತುಂಬಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜ್ಯ ಸರ್ಕಾರದಿಂದ ೧ ಎಕರೆ ೬ ಗುಂಟೆ ಸಿಎ ಸೈಟ್ ಮಂಜೂರಾಗಿರುವುದನ್ನು ಉಲ್ಲೇಖಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಹಕಾರದೊಂದಿಗೆ ಆ ಜಾಗವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಕುರಿತಾಗಿ ಸಮಾಜದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಬೇಕು. ಈ ವಿಷಯವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಹೇಳಿದರು.

ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸೊಪ್ಪಿ ಮಠದ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ ಅಧ್ಯಕ್ಷತೆ ವಹಿಸಿದ್ದರು.

ಮುದ್ನಾಳ ಕುಟುಂಬದ ಕೊಡುಗೆ ಅಪಾರ : ಮಹೇಶರೆಡ್ಡಿ ಮುದ್ನಾಳ

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷ ಮಹೇಶರೆಡ್ಡಿ ಮುದ್ನಾಳ, ಮಹಾಸಭಾದ ಬೆಳವಣಿಗೆ ಮತ್ತು ಸಂಘಟನೆಗೆ ಮುದ್ನಾಳ ಕುಟುಂಬದ ಕೊಡುಗೆ ಅಪಾರವಾಗಿದೆ. ಮಾಜಿ ಸಚಿವ ಲಿಂ. ವಿಶ್ವನಾಥರೆಡ್ಡಿ ಮುದ್ನಾಳ ಹಾಗೂ ಮಾಜಿ ಶಾಸಕ ಲಿಂ. ವೆಂಕಟರೆಡ್ಡಿ ಮುದ್ನಾಳ ಅವರು ಮಹಾಸಭಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜದ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಬೆಂಗಳೂರುದಲ್ಲಿ ಕೇಂದ್ರ ಕಚೇರಿ ಸ್ಥಾಪನೆ, ಹೈದರಾಬಾದ್‌ನಲ್ಲಿ ಸಮಾಜದ ವಸತಿ ನಿಲಯ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಕುಟುಂಬದ ಪಾತ್ರ ಸ್ಮರಣೀಯವಾಗಿದೆ. ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಹಿರಿಯರು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ. ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಮಹಾಸಭಾದ ಮೂಲಕ ಪ್ರಾಮಾಣಿಕ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.

ಯುವಪಡೆಯಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ : ಮಲ್ಲಿಕಾರ್ಜುನ ಅರುಣಿ

ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಅರುಣಿ ಗಾಜರಕೋಟ ಮಾತನಾಡಿ, ಜಿಲ್ಲೆಯ ಯುವಪಡೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಜವಾಬ್ದಾರಿ ನೀಡಿರುವುದು ಸಂತಸ ತಂದಿದೆ. ಶಾಸಕ ಶರಣಗೌಡ ಕಂದಕೂರ ಸೇರಿದಂತೆ ಹಿರಿಯರ ಮಾರ್ಗದರ್ಶನದಲ್ಲಿ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಶರಣಪ್ಪಗೌಡ ಕಾರೆಡ್ಡಿ ಮಲ್ಹಾರ, ಸಿದ್ಧಪ್ಪ ಹೊಟ್ಟಿ, ಸುರೇಶ ಜಾಕಾ, ರಾಜಶೇಖರ ಪಾಟೀಲ ಚಾಮನಹಳ್ಳಿ, ಮಲ್ಲು ಸ್ವಾಮಿ ಗುಡಿಮಠ ಗುರಸುಣಿಗಿ, ಬಸವರಾಜ ಸೊನ್ನದ, ಸಂಗಾರೆಡ್ಡಿಗೌಡ ಮಲ್ಹಾರ, ಅನ್ನಪೂರ್ಣ ಸಿ. ಪಾಟೀಲ, ಅಡಿವೆಪ್ಪ ಜಾಕಾ, ಭೀಮರೆಡ್ಡಿ ಗೋಗಿ, ಚನ್ನಮಲ್ಲಿಕಾರ್ಜುನ ಅಕ್ಕಿ, ಸಿದ್ಧಲಿಂಗಪ್ಪ ದೇಶಮುಖ, ಡಾ. ಚಂದ್ರಶೇಖರ ಸುಬೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಿದ್ಧರಾಜರೆಡ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.