
ಬೀದರ್: ನ.೪:ಕನ್ನಡಿಗರೆಲ್ಲರಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನ ಇರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ನಗರದ ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡಿನ ಇತಿಹಾಸವನ್ನು ಅರಿಯಬೇಕು. ಆಂಗ್ಲ ಭಾಷೆ ವ್ಯಾಮೋಹದಿಂದ ಹೊರ ಬಂದು, ಹೆಚ್ಚು ಹೆಚ್ಚು ಕನ್ನಡ ಬಳಸಬೇಕು ಎಂದು ತಿಳಿಸಿದರು.
ಉಪನ್ಯಾಸಕ ಡಾ. ಈಶ್ವರಯ್ಯ ಕೊಡಂಬಲ್ ಮಾತನಾಡಿ, ಮಾತೃ ಭಾಷೆ ಕನ್ನಡವನ್ನು ಉಳಿಸಿ, ಬೆಳೆಸಲು ಎಲ್ಲರೂ ಮುಂದಾಗಬೇಕು. ಆಗ ಮಾತ್ರ ಕನ್ನಡ ಬೆಳವಣಿಗೆ ಕಾಣಲು ಸಾಧ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಶಂಕರ ಕೆ. ಗಣಗೊಂಡ ಮಾತನಾಡಿ, ಕರುನಾಡು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ನಾಡು ಹಾಗೂ ನುಡಿಗೆ ತನ್ನದೇ ಆದ ಇತಿಹಾಸ ಇದೆ ಎಂದು ತಿಳಿಸಿದರು.
ವಿದ್ಯಾರ್ಥಿ ಸೋಪಾನ್ ಮಾತನಾಡಿದರು. ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್,
ಡಾ. ಚೆನ್ನಕೇಶವ ಮೂರ್ತಿ, ಡಾ. ರಾಜಕುಮಾರ ಅಲ್ಲೂರೆ, ಡಾ. ಸಂಗಶೆಟ್ಟಿ ಶೆಟಕಾರ್, ಮತ್ತಿತರರು ಇದ್ದರು.
ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಎಲಿಶಾ ದೇವದಾಸ ಸ್ವಾಗತಿಸಿದರು. ಶಿವಾನಿ ನಿರೂಪಿಸಿದರು. ಸುಜಾತಾ ವಂದಿಸಿದರು.






























