
ಬೀದರ್: ಜು.12:ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪರ್ಧೆ ಇರಬೇಕು. ಗೆದ್ದವರು ಸಂತಸ ಪಟ್ಟರೆ, ಸೋತವರು ಮತ್ತೆ ಪ್ರಯತ್ನಿಸಬೇಕು ಎಂದು ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ಶೆಟಕಾರ್ ಹೇಳಿದರು.
ನಗರದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಎಂಟನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಾವತ್ತೂ ಹತಾಶರಾಗಬಾರದು. ಕಲಿತ ಸಂಸ್ಥೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಸ್ವಾತ್ಮಾನಂದಗಿರಿ ಸ್ವಾಮೀಜಿ ಮಾತನಾಡಿ, ವಿನಯದಿಂದ ವಿದ್ಯೆಯ ಗೌರವ ಹೆಚ್ಚುತ್ತದೆ. ಸಂಸ್ಕಾರವಂತರಾಗಿ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂದು ತಿಳಿಸಿದರು.
ಮಹಮ್ಮದ್ ರಫಿ ತಾಳಿಕೋಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಶಸ್ಸು ಸತತ ಪರಿಶ್ರಮದಿಂದಲೇ ದೊರೆಯುತ್ತದೆ. ವಿದ್ಯಾರ್ಥಿಗಳ ಸಾಧನೆ ಶಿಕ್ಷಕನಿಗೆ ಬಹುದೊಡ್ಡ ಉಡುಗೊರೆ ಆಗಿರುತ್ತದೆ ಎಂದು ಹೇಳಿದರು.
ದಯಾನಂದ ಭೋಸ್ಲೆ ಮಾತನಾಡಿ, ವಿದ್ಯಾರ್ಥಿಗಳು ಅವಕಾಶ ಸಿಕ್ಕಾಗ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಅಂದಾಗಲೇ ಪ್ರತಿಭೆಗೆ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ಸಮಯ ಪಾಲನೆ, ಶಿಸ್ತು, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಾಧಕರಾಗಬಹುದು. ವಿದ್ಯಾರ್ಥಿಗಳು ಪಾಲಕರ ಮಾತು ಕೇಳಬೇಕು. ಪರಿಶ್ರಮ ಪಟ್ಟು ವ್ಯಾಸಂಗ ಮಾಡಬೇಕು. ಕೆಟ್ಟ ಚಟ ಹಾಗೂ ಕೆಟ್ಟವರಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ, ಶ್ರೀ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಶ್ರೀ ಶಿವಕುಮಾರೇಶ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮ್ಯಾಗೇರಿ, ಸಿಬ್ಬಂದಿ ನಿರ್ಮಲಾ ಕುಲಕರ್ಣಿ, ಸತ್ಯವಾನ್ ಭೋಸ್ಲೆ, ಗೋಪಾಲ್ ಕುಲಕರ್ಣಿ, ಧೂಳಪ್ಪ, ಶರಣಪ್ಪ ಸಾಗರ್, ನಾಗಪ್ಪ ಮೋಟಾ, ನಾಗನಾಥ ಬಿರಾದಾರ, ಶರಣಪ್ಪ ಪೂಜಾರಿ, ಶಿವಶಂಕರ, ಸತ್ಯವತಿ, ವಿಜಯಲಕ್ಷ್ಮಿ, ಮೀನಾಕ್ಷಿ, ಮಹಾನಂದಾ, ಸುನೀತಾ ಮತ್ತಿತರರು ಇದ್ದರು. ಶಿವಾನಿ, ಅಕ್ಷತಾ ನಿರೂಪಿಸಿದರು. ಮಹಾದೇವಿ ಸ್ವಾಗತಿಸಿದರು. ದೇವಿಕಾ ವಂದಿಸಿದರು.

































