ಕ್ರೀಡೆಯಲ್ಲಿ ಧನಾತ್ಮಕ ಭಾವನೋಟ ಇರಲಿ: ಅವಟಿ

ಆಲಮಟ್ಟಿ : ಅ.೬:ಕ್ರೀಡಾಕೂಟಗಳು ಕಾಟಾಚಾರಕ್ಕೆ ನಡೆಯದೇ ಪ್ರತಿ ಶಾಲೆಯ ಮಕ್ಕಳು ಪ್ರತಿ ಕ್ರೀಡೆಯಲ್ಲಿಯೂ ಧನಾತ್ಮಕವಾಗಿ ಭಾಗವಹಿಸಬೇಕು. ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಆಟೋಟಗಳಿಗೆ ಪ್ರಾಮುಖ್ಯತೆ ನೀಡಿ ಮಕ್ಕಳನ್ನು ಪ್ರಾಮಾಣಿಕವಾಗಿ ಹುರಿದುಂಬಿಸಬೇಕು ಎಂದು ಬಸವನ ಬಾಗೇವಾಡಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ನುಡಿದರು.
ಸ್ಥಳೀಯ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಜರುಗಿದ ಆಲಮಟ್ಟಿ ವಲಯದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕ ಬಸವರಾಜ ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ, ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮುಕಾತಿ೯ಹಾಳ, ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ, ಎಸ್.ಎಂ.ಪಾಟೀಲ, ಎಸ್.ಬಿ.ಚಿಮ್ಮಲಗಿ, ಡಿ.ವೈ.ವಾಲಿಕಾರ, ಎನ್.ಬಿ.ದಾಸರ, ಕೆ.ಎಸ್.ಮಾಳಗೊಂಡ, ಸಿಆರ್ ಪಿಗಳಾದ ಸುರೇಶ ಹುರಕಡ್ಲಿ, ಭಾಷಾಸಾಭ್ ಮನಗೂಳಿ, ಪ್ರಕಾಶ ದೋರನಳ್ಳಿ ಇತರರಿದ್ದರು.
ಜಿ.ಸಿ.ದ್ಯಾವಣ್ಣವರ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬೇನಾಳ ಮಕ್ಕಳು ಮಿಂಚು- ಸಮಗ್ರ ಪ್ರಶಸ್ತಿ :
ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಬೇನಾಳ ಆರ್.ಎಸ್.ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳು ತಮ್ಮ ಪರಾಕ್ರಮ ಪ್ರದಶಿ೯ಸಿ ಮಿಂಚಿದರು.
ಈ ಶಾಲೆ ಕೂಟದ ಬಹುತೇಕ ಪ್ರಶಸ್ತಿಗಳನ್ನು ಚಾಚಿಕೊಂಡು ಸಮಗ್ರ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಆಟೋಟಗಳ ಅಂಕಣದಲ್ಲಿ ಪಾರಪಥ್ಯ ಮೆರೆಯಿತು.