ಗಡಿಯಲ್ಲಿ ಕನ್ನಡ ಪಸರಿಸುವ ಕಾರ್ಯ ನಿರಂತರ ನಡೆಯಲಿ: ಪ್ರೊ. ಪರಮೇಶ್ವರ ನಾಯಕ್

ಬೀದರ: ಜು.4:ಕರ್ನಾಟಕ ಮತ್ತು ತೆಲಂಗಾಣ ಗಡಿ ಭಾಗದಲ್ಲಿ ಸಾಂಸ್ಕøತಿಕ ಉತ್ಸವ ಹಮ್ಮಿಕೊಳ್ಳುವುದರಿಂದ ಗಡಿಯಲ್ಲಿ ಕನ್ನಡ ಕಲರವ ಮೂಡಿಸುವುದರ ಜೊತೆಗೆ ಪರಸ್ಪರ ಕಲೆಗಳ ಮತ್ತು ಕಲಾವಿದರ ಪರಿಚಯ ಮಾಡಿಕೊಂಡಂತಾಗುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಪರಮೇಶ್ವರ ನಾಯಕ್ ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಓಂ ಸಾಯಿ ರೂರಲ್ ಡೆವಲಪಮೆಂಟ್ ಸೊಸೈಟಿ ಗಣೇಶಪುರ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸಂಭ್ರಮ -50ರ ಸವಿನೆನಪಿಗಾಗಿ ಜಹಿರಾಬಾದ ತಾಲೂಕಿನ ನ್ಯಾಲಕಲ್ ಮಂಡಲ್‍ನ ಮಾಮಿಡಿಗಿ ಗ್ರಾಮದಲ್ಲಿ ಆಯೋಜಿಸಿದ ತೆಲಂಗಾಣ ಹೊರನಾಡು ಗಡಿ ಸಾಂಸ್ಕøತಿಕ ಉತ್ಸವವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಲೆಗಳು ಮನಸಿಗೆ ಮುದ ನೀಡುತ್ತವೆ. ನೃತ್ಯ ಮಾಡುವುದರಿಂದ ಮನಸ್ಸು ಪರಿವರ್ತನೆಯಾಗುತ್ತದೆ. ಕಲೆ ಮತ್ತು ಕಲಾವಿದರಿಗೆ ಗೌರವ ಕೊಡಬೇಕು. ಅರ್ಹ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಒದಗಿಸುವ ಕಾರ್ಯ ಆಗಬೇಕು. ಅವರಿಗೆ ವೇದಿಕೆ ಒದಗಿಸಿಕೊಟ್ಟು ಸಾಮಾಜಿಕ ಮತ್ತು ಆರ್ಥಿಕವಾಗಿ ಸಧೃಢ ಮಾಡಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಮುಂದಿನ ಪೀಳಿಗೆಗೆ ಜಾನಪದ ಪರಂಪರೆ ತಿಳಿಸುವುದೇ ಈ ಸಾಂಸ್ಕøತಿಕ ಉತ್ಸವದ ಮೂಲ ಧ್ಯೇಯವಾಗಿದೆ. ಅಲ್ಲದೇ ಕರ್ನಾಟಕದ ಕಲೆಗಳು ತೆಲಂಗಾಣದವರಿಗೆ, ತೆಲಂಗಾಣದ ಕಲೆಗಳು ಕರ್ನಾಟಕದವರಿಗೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಇಂತಹ ಕಲಾ ಉತ್ಸವದಿಂದ ಕಲೆಗಳ ಹಿರಿಮೆ ಗರಿಮೆ ಸಂಸ್ಕøತಿ ಶ್ರೀಮಂತಿಕೆಯ ಪರಿಚಯ ಮಾಡಿಕೊಟ್ಟಂತಾಗುತ್ತದೆ. ಹಾಡು ನೃತ್ಯದಿಂದ ದೀರ್ಘಕಾಲಿನ ಕಾಯಿಲೆಗಳು ದೂರವಾಗುತ್ತವೆ. ಕಲೆಯಿಂದ ಒತ್ತಡದ ಬದುಕು ದೂರವಾಗಿ ಮನಸ್ಸು ಪ್ರಫುಲ್ಲವಾಗುತ್ತದೆ ಎಂದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ ನಮ್ಮ ಬೀದರ ಜಿಲ್ಲೆಯ ನೂರಾರು ಕಲಾವಿದರು ರಾಷ್ಟ್ರದ ಹಲವು ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿ ಬಂದಿದ್ದಾರೆ. ಉತ್ತರ ಭಾರತದ ಅನೇಕ ಕಲಾವಿದರು ಬೀದರ ಜಿಲ್ಲೆಗೆ ಬಂದು ತಮ್ಮ ಕಲಾಪ್ರದರ್ಶನ ಮಾಡಿದ್ದಾರೆ. ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ವೇದಿಕೆ ಒದಗಿಸುವುದೇ ನಮ್ಮ ಮೂಲ ಗುರಿಯಾಗಿದೆ ಎಂದರು.
ಓಂಸಾಯಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಿವಶರಣಪ್ಪ ಗಣೇಶಪುರ ಸ್ವಾಗತಿಸಿದರು. ಮಹೇಶ ಕುಂಬಾರ ನಿರೂಪಿಸಿದರು. ಡಾ. ಸುನಿತಾ ಕೂಡ್ಲಿಕರ್ ವಂದಿಸಿದರು. ವೇದಿಕೆ ಮೇಲೆ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಜಹಿರಾಬಾದ ಗ್ರಾಮೀಣ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಜಕಲು ಹನುಮಂತ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಚಲ್ಲಾ ರಾಜಶೇಖರ, ಪ್ರಮುಖರಾದ ಆರ್ ಮಾರುತಿ, ರಾಜಕುಮಾರ ಪಸಾರೆ, ಧರ್ಮೇಂದ್ರ ಪೂಜಾರಿ, ಎಚ್ ಸಿದ್ದಣ್ಣ, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ಪಿ ಶ್ರೀನಿವಾಸ, ರಜಿ ಇಂದ್ರಸೇನರೆಡ್ಡಿ ಸೇರಿದಂತೆ ಹಲವರಿದ್ದರು.
ಜನಪದ ಕಲಾಪ್ರದರ್ಶನ: ಅಶ್ವಿನಿ ರಾಜಕುಮಾರ ಬಂಪಳ್ಳಿ ಅವರ ಶಾಸ್ತ್ರೀಯ ಸಂಗೀತ, ಮಹೇಶ ಕುಂಬಾರ ಅವರ ಜನಪದ ಹಾಡುಗಳು, ಶಿವಕುಮಾರ ದೊಡ್ಡಮನಿ ಅವರ ಕಂಸಾಳೆ ಕುಣಿತ, ಅಂಬಾದಾಸ್ ಪೊಳ್ ಅವರ ಡೊಳ್ಳು ಕುಣಿತ, ಶಾರದಾಬಾಯಿ ರಾಠೋಡ ಅವರ ಲಂಬಾಣಿ ಕುಣಿತ, ಸೊನಿಕಾ ಮತ್ತು ಅಂಬಿಕಾ ಅವರ ಸುಗ್ಗಿ ಕುಣಿತ ಮತ್ತು ಸರ್ಕಾರಿ ಪ್ರೌಢ ಶಾಲೆ ಮಾಮಿಡಿಗಿ ಮಕ್ಕಳಿಂದ ಬದುಕಮ್ಮ ಜಾನಪದ ನೃತ್ಯ ಆಕರ್ಷಕವಾಗಿ ಜರುಗಿತು.