Home ಜಿಲ್ಲೆ ಕಲಬುರಗಿ ಬಾಲ್ಯದಿಂದಲೇ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಕಾರ್ಯವಾಗಲಿ

ಬಾಲ್ಯದಿಂದಲೇ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಕಾರ್ಯವಾಗಲಿ

ಕಲಬುರಗಿ:ಮಾ.20: ಇಂದಿನ ಯುವ ಜನತೆ ವಿದೇಶಿ ಸಂಸ್ಕøತಿಗೆ ಮಾರುಹೋಗಿ ನಮ್ಮತನ ಮರೆಯುತ್ತಿದ್ದಾರೆ. ಇದರಿಂದ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಮಕ್ಕಳಿಗೆ ಅವರ ಬಾಲ್ಯದಿಂದಲೇ ಮೌಲ್ಯಗಳು, ನಮ್ಮ ದೇಶದ ಸಂಸ್ಕøತಿ, ಪರಂಪರೆ, ಹಬ್ಬಗಳು, ಉತ್ಸವಗಳ ಹಿನ್ನಲೆಯ ಬಗ್ಗೆ ಅವರಲ್ಲಿ ಬಿತ್ತುವ ಕಾರ್ಯ ಮಾಡಬೇಕಾದದ್ದು ಇಂದಿನ ಜರೂರಿಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ಮಹಾಗಾಂವ ಕ್ರಾಸ್ ಸಮೀಪದ ಚಿಗುರು ನಿರ್ಗತಿಕ ಮತ್ತು ಅನಾಥ ಮಕ್ಕಳ ನಿಲಯದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಯುಗಾದಿ ಹಬ್ಬದ ನಿಮಿತ್ಯ ಗುರುವಾರ ಜರುಗಿದ ‘ಯುಗಾದಿ ಮಕ್ಕಳ ಕಲರವ’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನಾಥಾಲಯದ ಮುಖ್ಯಸ್ಥ ಶರಣು ಎ.ಕಮಠಾಣ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು, ಶ್ರಮಜೀವಿಗಳು ವರ್ಷದ ಕೊನೆಯಲ್ಲಿ ತಮ್ಮ ಚಟುವಟಿಕೆಗಳನ್ನು ಮುಗಿಸಿ, ಆ ವರ್ಷಕ್ಕೆ ವಿದಾಯ ಹೇಳಿ, ಮುಂದಿನ ವರ್ಷವನ್ನು ಸ್ವಾಗಿಸುವ ದಿನ ಇದಾಗಿದೆ. ಸೂಕ್ತ ಕಾಲಕ್ಕೆ ಮಳೆಯಾಗಿ, ಉತ್ತಮ ಫಸಲನ್ನು ಪಡೆದು ರೈತ ಸದೃಢನಾಗಬೇಕು. ನಿಸರ್ಗದೊಂದಿಗೆ ಭಾರತೀಯ ಹಬ್ಬಗಳು ಆಚರಿಸಲಾಗುತ್ತದೆ. ಯುಗಾದಿ ಸಮಯದಲ್ಲಿ ಇಡೀ ಗಿಡ-ಮರಗಳನ್ನು ತನ್ನ ಹಳೆಯ ಎಲೆಗಳನ್ನು ಉದರಿಸಿಕೊಂಡು, ಹೊಸದಾಗಿ ಚಿಗುರುತ್ತವೆ. ದೇಶದ ಹಬ್ಬಗಳು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ವಿಶೇಷತೆಯಾಗಿದೆ. ಇಂತಹ ಹಬ್ಬಗಳ ಆಚರಣೆಯ ಹಿನ್ನಲೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕಮಠಾಣ, ಕಾಮಣ್ಣ ಮದಗುಣಕಿ ಸೇರಿದಂತೆ ವಯೋವೃದ್ಧರು, ಮಕ್ಕಳು ಭಾಗವಹಿಸಿದ್ದರು.