ವಿದ್ಯಾರ್ಥಿನಿಯರಲ್ಲಿ ಶರಣರ ಆದರ್ಶಗಳು ಮೂಡಲಿ

ವಿಜಯಪುರ,ಜ೨೫: ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಪಾಠಶಾಲೆಯಲ್ಲಿ ಇಂದು ಅಖಿಲ ಕರ್ನಾಟಕ ಮಿತ್ರ ಸಂಘ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ’ದಾಸೋಹ ದಿನ’ ಹಾಗೂ ಶರಣ ’ಅಂಬಿಗರ ಚೌಡಯ್ಯ ನವರ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.


ನಿಷ್ಠುರವಾದಿ ಶರಣ ಅಂಬಿಗರ ಚೌಡಯ್ಯ;ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ ಹಡಪದ ಅವರು ಮಾತನಾಡಿ, “೧೨ನೇ ಶತಮಾನದ ಕ್ರಾಂತಿಕಾರಿ ಶರಣರಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರು. ಅವರು ಕೇವಲ ದೋಣಿ ನಡೆಸುವ ಕಾಯಕಕ್ಕೆ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅತ್ಯಂತ ನಿಷ್ಠುರವಾದ ವಚನಗಳನ್ನು ರಚಿಸಿದರು. ಭಕ್ತಿ ಎನ್ನುವುದು ಕೇವಲ ಬಾಹ್ಯ ಪ್ರದರ್ಶನವಾಗದೆ ಅಂತರಂಗದ ಶುದ್ಧಿಯಾಗಿರಬೇಕು ಎಂದು ಪ್ರತಿಪಾದಿಸಿದವರು ಅವರು. ವಿದ್ಯಾರ್ಥಿನಿಯರು ಇಂತಹ ಶರಣರ ಜೀವನ ಚರಿತ್ರೆಯನ್ನು ಓದಿ ದೃಢ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು,” ಎಂದು ಕರೆ ನೀಡಿದರು.


ಅಕ್ಷರ ಮತ್ತು ಅನ್ನದ ದಾಸೋಹದ ಮಹತ್ವ; ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಮನೋಹರ್‌ರವರು ಮಾತನಾಡಿ, “ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯಸ್ಮರಣೆಯ ಅಂಗವಾಗಿ ಆಚರಿಸಲಾಗುವ ಈ ’ದಾಸೋಹ ದಿನ’ ನಮಗೆ ದಾನ ಮತ್ತು ಸೇವೆಯ ಮಹತ್ವವನ್ನು ಕಲಿಸುತ್ತದೆ. ಸ್ವಾಮೀಜಿಯವರು ಅಕ್ಷರ, ಅನ್ನ ಮತ್ತು ಜ್ಞಾನದ ಮೂಲಕ ಲಕ್ಷಾಂತರ ಮಕ್ಕಳ ಬದುಕನ್ನು ರೂಪಿಸಿದ್ದಾರೆ. ಅವರ ಸಂಸ್ಮರಣೆಯ ದಿನದಂದು ನಾವೆಲ್ಲರೂ ಪರಹಿತಕ್ಕಾಗಿ ಶ್ರಮಿಸುವ ಸಂಕಲ್ಪ ಮಾಡಬೇಕು,” ಎಂದು ತಿಳಿಸಿದರು.


ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷರಾದ ಚಿ. ಮ. ಸುಧಾಕರ್, ಸಂಘದ ಕಾರ್ಯದರ್ಶಿ ಆರ್. ಮುನಿರಾಜು, ಶಾಲೆಯ ಶಿಕ್ಷಕರಾದ ಹರೀಶ್ ಹಾಗೂ ನಾಗಮಣಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಮತ್ತು ನೂರಾರು ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.