
ಇಂಡಿ:ಜು.4: ಪ್ಲಾಸ್ಟಿಕ್ ತ್ಯಾಜ್ಯವು ಜಾಗತಿಕ ಸಮಸ್ಯೆಯಾಗಿದೆ. ಜಗತ್ತಿನ ಅತಿ ಎತ್ತರದ ಗಿರಿ ಶಿಖರಗಳಿಂದ ಹಿಡಿದು ಆಳ ಸಮುದ್ರದ ಒಡಲೊಳಗೆ ಸೇರಿಕೊಳ್ಳುತ್ತಿರುವ ಇದು ಜನ, ಜಾನುವಾರು ಹಾಗೂ ಸಸ್ಯ ಸಂಕುಲಕ್ಕೆ ಮಾರಕವಾಗಿದ್ದು, ಇದರ ನಿಯಂತ್ರಣ ಇಂದಿನ ಅಗತ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ‘ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ’ದ ನಿಮಿತ್ತ ಹಮ್ಮಿಕೊಂಡ ‘ಪ್ಲಾಸ್ಟಿಕ್ ಚೀಲ ಬಿಡಿ-ಬಟ್ಟೆ ಚೀಲ ಹಿಡಿ’ ಚರ್ಚಾಗೋಷ್ಠಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ. ಅವನ್ನು ಸುಟ್ಟರೆ ‘ಡಯಾಕ್ಸಿನ್’ ಎಂಬ ವಿಷಪೂರಿತ ಅಂಶ ಬಿಡುಗಡೆಯಾಗಿ, ಅದು ಗಾಳಿಯಲ್ಲಿ ಬೆರೆತು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಪ್ಲಾಸ್ಟಿಕ್ ಚೀಲಗಳ ಬಳಕೆ ಕಡಿಮೆ ಮಾಡಿ, ಬಟ್ಟೆ ಚೀಲ ಬಳಸುವ ರೂಢಿ ದೈನಂದಿನ ಜೀವನದ ಭಾಗವಾಗಬೇಕಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ತರಕಾರಿ, ದಿನಸಿ ವಸ್ತುಗಳನ್ನು ತರಲು ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ್ಟೆ ಚೀಲಗಳನ್ನು ಬಳಸುವ ರೂಢಿ ಎಲ್ಲರಲ್ಲಿ ಮೂಡಿದಾಗ ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತವಾಗಿ, ಸದೃಢ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.