
ಬೀದರ್:ಮೇ.26: ಇಂದಿನ ಸರ್ಕಾರಗಳು ಬಸವಾದಿ ಶರಣರ ತತ್ವ ಅನುಸರಿಸುವುದು ಅವಶ್ಯಕವಾಗಿದೆ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ ಗಾಜನೂರು ಹೇಳಿದರು.
ಲಿಂಗಾಯತ ಮಹಾ ಮಠದ ವತಿಯಿಂದ ಅಕ್ಕ ಅನ್ನಪೂರ್ಣತಾಯಿ ಅವರ ಸ್ಮರಣೋತ್ಸವ ನಿಮಿತ್ತ ಇಲ್ಲಿಯ ಬಸವಗಿರಿಯಲ್ಲಿ ಭಾನುವಾರ ನಡೆದ ಬಸವೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅನುಭಾವ ಮಂಡಿಸಿದರು.
ಬಸವಣ್ಣನವರು ಜಾತಿ, ವರ್ಣ, ವರ್ಗ, ಲಿಂಗ ಭೇದಗಳಿಂದ ಒಡೆದು ಹೋಗಿದ್ದ ಸಮಾಜಕ್ಕೆ ಒಟ್ಟಾಗಿ ಬಾಳುವ ನೈತಿಕ ಸೂತ್ರ ನೀಡಿದರು. ಶ್ರೇಣಿಕೃತ ಸಮಾಜ ಅಲ್ಲಗಳೆದು ಸಮ ಸಮಾಜ ಕಟ್ಟಿದರು ಎಂದು ತಿಳಿಸಿದರು.
ಐದು ಸಾವಿರ ವರ್ಷಗಳಿಂದ ಭಾರತೀಯರು ಸಾಂಸ್ಕøತಿಕ ವಸಾಹತುಶಾಹಿಗೆ ಒಳಗಾಗಿದ್ದರೆ. ಇಂಥ ಶೋಷಣೆಯ ವಿರುದ್ಧದ ಪ್ರಥಮ ಸ್ವಾತಂತ್ರ್ಯ ಚಳವಳಿಯೇ ಶರಣ ಚಳವಳಿ. ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಕಲ್ಪಿಸಿದ ಶರಣರು ಬದುಕಿಗೆ ನವ ದೃಷ್ಟಿಕೋನ ನೀಡಿದರು ಎಂದು ಹೇಳಿದರು.
ಹಿಂದೆ-ಇಂದು-ಎಂದೆಂದಿಗೂ ವಿಶ್ವದ ಎಲ್ಲ ಸವಾಲುಗಳಿಗೆ ಸಾರ್ವಕಾಲಿಕವಾದ ಪರಿಹಾರ ನೀಡಬಲ್ಲ ಸಾಂಸ್ಕøತಿಕ ಆಕಾರಗಳೇ ವಚನಗಳು ಎಂದು ಬಣ್ಣಿಸಿದರು.
ಬಸವೋತ್ಸವವು ಅಕ್ಕ ಅನ್ನಪೂರ್ಣತಾಯಿ ಅವರ ತಾಯ್ತನಕ್ಕೆ ಸಾಕ್ಷಿ. ಇಷ್ಟು ಜನ ಪುರುಷರು ಸೇರಿ ಓರ್ವ ಮಹಿಳೆಯನ್ನು ನೆನಪಿಸುತ್ತಿರುವುದು ಆ ತಾಯಿಯ ಸಾಧನೆಗೆ ನಿದರ್ಶನ ಎಂದರು.
ಆಳಂದದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಕೆಲವರು ಸಮಾಜವನ್ನು ಒಡೆದು ಆಳುವ ವಿಚಾರ ಬಿತ್ತುತ್ತಿದ್ದಾರೆ. ಲಿಂಗಾಯತ ರಾಜಕಾರಣಿಗಳು, ಮಠಗಳು ಹಾಗೂ ಸಮಾಜ ಅದಕ್ಕೆ ಬಲಿಯಾಗಬಾರದು. ಬಸವ ಭಕ್ತರು ಎಚ್ಚರರಾಗಬೇಕು. ಗಣಾಚಾರ ತತ್ವ ಮರೆಯದೆ, ವಚನಗಳ ಕಲಬೆರಕೆ ವಿರುದ್ಧ ಹೋರಾಡಬೇಕು ಎಂದು ಸಲಹೆ ಮಾಡಿದರು.
ಬಸವಕಲ್ಯಾಣದ ಗುಣತೀರ್ಥವಾಡಿಯ ಕಲ್ಯಾಣ ಮಹಾ ಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ಹುಟ್ಟೂರಿನಲ್ಲಿ ಬೆಳೆದು, ಹುಟ್ಟೂರಿನಲ್ಲಿಯೇ ಅಪ್ರತಿಮ ಸಾಧನೆಗೈದ ಚೇತನ ಅಕ್ಕ ಅನ್ನಪೂರ್ಣತಾಯಿ. 12ನೇ ಶತಮಾನದಲ್ಲಿ ಅಲ್ಲಮಪ್ರಭುದೇವರು ಅಕ್ಕ ಮಹಾದೇವಿಯನ್ನು ಪರೀಕ್ಷಿಸಿ ಜಗದಕ್ಕ ಎಂದು ಗೌರವಿಸಿದರು. 21ನೇ ಶತಮಾನದ ಅಕ್ಕನವರು ಪ್ರಭುದೇವರನ್ನು ಪರೀಕ್ಷಿಸಿ ಗುರುವಾಗಿಸಿದರು ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಬಸವ ಭಕ್ತಿ ಬಿತ್ತಿದ ತಾಯಿ. ಭಕ್ತಿಯಲ್ಲಿ ಅವರು ಗೆದ್ದಿದ್ದಾರೆ. ಫಲಾಪೇಕ್ಷೆ ಇಲ್ಲದೆ ಅಕ್ಕನ ಸೇವೆಗೈದ ಪ್ರಭುದೇವರು ಸಹಜವಾಗಿಯೇ ಅವರ ಉತ್ತರದಾಯಿತ್ವ ಪಡೆದು ಸೇವೆಗೈಯುತ್ತಿದ್ದಾರೆ ಎಂದು ತಿಳಿಸಿದರು.
ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಶರಣರ ಸಾಲಿಗೆ ಸೇರಿದ ಅಕ್ಕ ಸಾವಿಗೆ ಅಂಜಲಿಲ್ಲ, ಅಳುಕಲಿಲ್ಲ. ಈ ಶರೀರದ ಶಕ್ತಿ ಕುಂದಿದೆ. ಈ ಶರೀರ ಹೊತ್ತು ಪ್ರವಚನ ಸಾಧ್ಯವಾಗದಿದ್ದರೆ ಇದನ್ನು ತ್ಯಜಿಸಿ ಮತ್ತೆ ಬಸವ ತತ್ವ ಪ್ರಸಾರಕ್ಕೆ ಹುಟ್ಟಿ ಬರುವುದೇ ಲೇಸು ಎನ್ನುತ್ತಿದ್ದರು. ಅಕ್ಕನವರೊಂದಿಗೆ ಕಳೆದ ಪ್ರತಿ ದಿನವೂ ನಮಗೆ ಪಾಠಗಳಾಗಿವೆ ಎಂದು ಹೇಳಿದರು.
ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ ಮಾತನಾಡಿ, ಇಂದಿನ ಸಮಾಜಕ್ಕೆ, ಯುವಕರಿಗೆ ವಚನಗಳನ್ನು ಯಾವ ರೀತಿ ಕೊಡಬೇಕೆಂಬ ಕೌಶಲ ಅಕ್ಕನವರಲ್ಲಿತ್ತು. ಆ ಕ್ರಾಂತಿಯ ತೇರನ್ನು ಪ್ರಭುದೇವ ಸ್ವಾಮೀಜಿ ಸಮರ್ಥವಾಗಿ ಎಳೆದುಕೊಂಡು ಹೊರಟಿದ್ದಾರೆ ಎಂದು ತಿಳಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, ಬಸವ ತತ್ವ ನಿರಾಕರಣೆ ಜಗತ್ತಿನಲ್ಲಿ ಸಾಧ್ಯವಿಲ್ಲ. ಬಸವಣ್ಣನವರನ್ನು ಬಿಟ್ಟರೆ ಭಾರತ ವಿಶ್ವಗುರುವಾಗದು ಎಂದು ಹೇಳಿದರು.
ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರಿ ಸಲಹಾ ಸಮಿತಿ ಸದಸ್ಯೆ ಜಗದೇವಿ ಪನಸಾಲೆ ಅಧ್ಯಕ್ಷತೆ ವಹಿಸಿದ್ದರು.
ಅತ್ತಾಪುರದ ನಾಗರಾಜ ಸೋರಳ್ಳಿ, ಬಸವ ಜಯಂತಿ ಉತ್ಸವ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ದೇವಕಿ ನಾಗೂರೆ, ಕಲಬುರಗಿಯ ಜಗನ್ನಾಥ ಇದಲಾಯಿ, ಪತ್ರಕರ್ತ ಜಗನ್ನಾಥ ಶೇರಿಕಾರ್, ಹುಮನಾಬಾದನ ಮಲ್ಲಿಕಾರ್ಜುನ ಸಂಗಮಕರ್, ಹಲಸಿಯ ಸಂತೋಷ ಪಾಟೀಲ, ಮಲ್ಲಮ್ಮ ಹೆಬ್ಬಾಳೆ, ಅನಿತಾ ಆರ್. ಪಾಟೀಲ, ವಿಜಯಲಕ್ಷ್ಮಿ ರಾಜೋಳೆ, ಸಾಹಿತಿ ರಮೇಶ ಮಠಪತಿ ಇದ್ದರು.
ಅಶ್ವಿನಿ ರಾಜಕುಮಾರ ಚಿಟ್ಟಾ ವಚನ ಸಂಗೀತ ನಡೆಸಿಕೊಟ್ಟರು. ನೃತ್ಯಾಂಗನಾ ನಾಟ್ಯ ಕಲಾ ಕೇಂದ್ರದ ಕಲಾವಿದರು ಆಕರ್ಷಕ ವಚನ ನೃತ್ಯ ಪ್ರದರ್ಶಿಸಿದರು. ಕಲ್ಪನಾ ಬೀದೆ ಸ್ವರಚಿತ ಕವನ ವಾಚಿಸಿದರು.
ಶಿಲ್ಪಾ ಮಜಗೆ ನಿರೂಪಿಸಿದರು. ವಚನಶ್ರುತಿ ಅಭಿಲಾಶ್ ಸ್ವಾಗತಿಸಿದರು.






















