
ತಾಳಿಕೋಟೆ:ಮೇ.12: ಬಾವೂರು ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಗ್ರಾಮವಾಗಿದೆ. ಟ್ರಸ್ಟ್‍ನ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಗ್ರಾಮವನ್ನು ಜಿಲ್ಲೆಯ ಒಂದು ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಿ ಎಂದು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಮಾಜ ಸೇವಕ ಕಾಂಗ್ರೇಸ್ ಮುಖಂಡ ಸಿ.ಬಿ.ಅಸ್ಕಿ(ಕೊಣ್ಣೂರ) ಅವರು ಹೇಳಿದರು.
ತಾಲೂಕಿನ ಬಾವೂರ ಗ್ರಾಮದಲ್ಲಿ ರವಿವಾರರಂದು ಹಮ್ಮಿಕೊಂಡ ಅಂಜುಮನ್ ಇಸ್ಲಾಂ ಟ್ರಸ್ಟ್ ಉದ್ಘಾಟನೆ ಹಾಗೂ ಸಮುದಾಯ ಭವನ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲರೂ ಒಗ್ಗೂಡಿಕೊಂಡು ಟ್ರಸ್ಟನ್ನು ರಚಿಸಿಕೊಂಡು ಎಲ್ಲರ ಸಹಭಾಗಿತ್ವದಲ್ಲಿ ಸಮಾಜಮುಖಿ ಕೆಲಸಕ್ಕೆ ಮುಂದಾಗಿರುವದು ಶ್ಲಾಘನೀಯವಾಗಿದೆ ಎಂದ ಅವರು ಈ ಸಮುದಾಯ ಭವನದ ನಿರ್ಮಾಣಕ್ಕೆ ಅಸ್ಕಿ ಫೌಂಡೇಶನ್ ವತಿಯಿಂದ ಸುಮಾರು 200 ಚೀಲ ಸೀಮೆಂಟ್ ಉಚಿತವಾಗಿ ಒದಗಿಸುವದಾಗಿ ಘೋಷಿಸಿದರು.
ಸಮಾರಂಭವನ್ನು ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪಲ್ಲವಿ ನಾಡಗೌಡ ಅವರು ಮಾತನಾಡಿ ಸಮಾಜದಲ್ಲಿರುವ ಎಲ್ಲ ರೀತಿಯ ಕೆಡುಕುಗಳನ್ನು ನಿರ್ಮೂಲನೆಗೊಳಿಸಿ ಎಲ್ಲ ವರ್ಗದ ಜನರ ಮಧ್ಯೆ ಪ್ರೀತಿ ವಿಶ್ವಾಸ ಹಾಗೂ ಭಾತೃತ್ವವನ್ನು ಬೆಳೆಸುವುದು ಸಂಘಟನೆಗಳ ಸಾಮಾಜಿಕ ಜವಾಬ್ದಾರಿಯಾಗಿದೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಹೆತ್ತವರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು. ಇತ್ತೀಚಿಗೆ ಗ್ರಾಮದಲ್ಲಿ ಯುವಕರು ಕುಡಿತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಅವರನ್ನು ಸರಿದಾರಿಗೆ ತರುವ ಕೆಲಸ ಟ್ರಸ್ಟ್ ಸದಸ್ಯರು ಮಾಡಬೇಕು. ಗ್ರಾಮದ ಶಾಂತಿ ಕೆಡದಂತೆ ನೋಡಿಕೊಂಡು ನಾವೆಲ್ಲರೂ ಒಂದು ಎಂಬ ಭಾವನೆ ಯೊಂದಿಗೆ ಬದುಕಲು ಪ್ರಯತ್ನಿಸಿ ಎಂದರು.
ಗ್ರಾಮದ ಗಣ್ಯರಾದ ಎಚ್.ಎಸ್.ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟನ ಸದಸ್ಯರು ಗ್ರಾಮದ ಹಿರಿಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕು. ಟ್ರಸ್ಟ್ ಮೂಲಕ ಗ್ರಾಮದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಗ್ರಾಮದ ಕೀರ್ತಿ ತರಲು ಪ್ರಯತ್ನಿಸಬೇಕು ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ತಾಳಿಕೋಟೆ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮದ ಗಣ್ಯರಾದ ಆನಂದರಾಜ್ ದೇಶಮುಖ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶಾಂತಗೌಡ ಪಾಟೀಲ, ನಿಂಗನಗೌಡ ಬಿರಾದಾರ, ಮಲ್ಲನಗೌಡ ಬಳಗಾನೂರ, ಬಾಪ್ ಢವಳಗಿ, ರೆಹಮಾನಸಾಬ ಅವಟಿ, ಆಸೀಫ್ ತಾರಘರ, ಟ್ರಸ್ಟ್ ಅಧ್ಯಕ್ಷ ಬಸೀರ ಅಹ್ಮದ್ ಕಾಳಗಿ, ಉಪಾಧ್ಯಕ್ಷ ಬಸೀರ ಅಹ್ಮದ್ ಕಮತಗಿ, ಪ್ರಧಾನ ಕಾರ್ಯದರ್ಶಿ ಲಾಲಸಾಬ ನಿಡಗುಂದಿ, ಸಹ ಕಾರ್ಯದರ್ಶಿ ಮಹೆಬೂಬ ಕಮತಗಿ, ಖಜಾಂಚಿ ರಾಜಣ್ಣ ನಿಡಗುಂದಿ, ಸದಸ್ಯರಾದ ಇಬ್ರಾಹಿಂ ನಿಡಗುಂದಿ, ದಾವಲಸಾಬ ಕಾಳಗಿ, ಹಸನ್ ಖಾದ್ರಿ, ಬಂದೇನವಾಜ್ ನಿಡಗುಂದಿ, ಮುಸ್ತಫಾ ನಿಡಗುಂದಿ, ಹುಸೇನ್ ಜಮಾದಾರ, ನಬಿಸಾಬ ಕಮತಗಿ, ಸಾಧೀಕ ನಿಡಗುಂದಿ, ಮೋದಿನಸಾಬ, ರಿಯಾಜ ಹಾಗೂ ಗ್ರಾಮಸ್ಥರು ಇದ್ದರು.
ಶಿಕ್ಷಕಿ ಶ್ರೀಮತಿ ಜಿ.ಜಿ. ತಾಳಿಕೋಟಿ ಸ್ವಾಗತಿಸಿ ನಿರೂಪಿಸಿದರು.
ನೀರು ಗಾಳಿಗೆ ಇಲ್ಲದ ಜಾತಿ ವ್ಯವಸ್ಥೆ ನಮಗ್ಯಾಕೆ ಬೇಕು ಸಮಾಜಮುಖಿ ಕೆಲಸ ಮಾಡಲು ಬಾವೂರಿನ ಅಂಜುಮನ್ ಇಸ್ಲಾಂ ಟ್ರಸ್ಟ್ ಕಮಿಟಿಯ ಉದ್ಘಾಟಿಸುವದರೊಂದಿಗೆ ಮುಂದೆ ಸಾಗಿದ ಯುವಕರು ಎಲ್ಲರಿಗೂ ಮಾಡಲ್ ಆಗಿ ಬೆಳೆಯಲಿ ಬಾವೂರಿನ ಹೆಸರು ರಾಜ್ಯಮಟ್ಟದಲ್ಲಿ ಗುರುತಿಸುವಂತಹ ಕಾರ್ಯವಾಗಲಿ.
ಶ್ರೀಮತಿ ಪಲ್ಲವಿ ನಾಡಗೌಡ
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ
























