
ತುಮಕೂರು, ನ. ೨೬- ನಮ್ಮದೇಶಕ್ಕೆ ಸ್ವಾತಂತ್ರ್ಯದೊರೆತು, ಸ್ವತಂತ್ರ ಸಂವಿಧಾನರಚನೆ ಮಾಡಿಕೊಂಡರೂ ನಗರಗಳು ಮಾತ್ರ ಸ್ವಚ್ಛವಾಗಿಲ್ಲ. ಸಂವಿಧಾನದ ಆಶಯದಅಡಿಯಲ್ಲಿ ಕೊಳಗೇರಿಗಳು ನವನಗರ ಆಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಎಂ.ಶೇಟ್ ಹೇಳಿದರು.
ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ‘ಮನ-ಮನೆಗೂ ಸಂವಿಧಾನ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಳಗೇರಿ ಎಂಬುದು ಭೌತಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಬದಲಾಗಬೇಕು.ಸಂವಿಧಾನದ ಆಶಯದಡಿಯಲ್ಲಿ ತಾರತಮ್ಯ ರಹಿತ ಸಮ ಸಮಾಜ ಕಟ್ಟಬೇಕು. ಹಾಗಾಗಿ ಈ ಮನ ಮನೆಗೂ ಸಂವಿಧಾನ ಕಾರ್ಯಕ್ರಮ ಚಾಲನೆಯಾಗಿದೆ. ಇದರ ಅನುಕೂಲವನ್ನು ಪ್ರತಿಯೊಬ್ಬರು ಪಡೆದುಕೊಂಡು ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ಹಾಗಾದರೆ ಮಾತ್ರ ಸಂವಿಧಾನಕ್ಕೆ ಸಂವಿಧಾನ ರಚನಕಾರರಿಗೆ ನಾವು ನೀಡುವ ಗೌರವವಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಸಹಪ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು, ಭಾರತದಲ್ಲಿ ೩೬೦೦ ಕ್ಕೂ ಅಧಿಕ ಜಾತಿಗಳಿವೆ. ಸಾಕಷ್ಟು ಉಪಪಂಗಡಗಳಿವೆ. ಕರ್ನಾಟಕದಲ್ಲಿ ೧೫೦೦ ಕ್ಕೂ ಹೆಚ್ಚು ಜಾತಿಗಳಿವೆ. ಕುಲ ಕಸುಬಿನ ಆಧಾರದ ಮೇಲೆ ಜಾತಿ ತೀರ್ಮಾನವಾಗುತ್ತದೆ. ಸಂವಿಧಾನ ರಚನೆಯಾಗಿ ೭೫ ವರ್ಷಗಳ ಫಲವಾಗಿ ನಾವಿಂದು ಜಾತಿ ಧರ್ಮದ ಭೇದವಿಲ್ಲದೆ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಸ್ಲಂಜನಾಂದೋಲನ ರಾಜ್ಯ ಸಂಚಾಲಕ ನರಸಿಂಹಮೂರ್ತಿ, ಸಂಪನ್ಮೂಲ ವ್ಯಕ್ತಿ ಜನಾರ್ದನ ಕೆಸರಗದ್ದೆ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿರಾಮರೆಡ್ಡಿ, ಸಂವಿಧಾನ ಸ್ನೇಹಿತರ ಬಳಗದ ಪೂರ್ಣ, ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.


























