Home ಜಿಲ್ಲೆ ಕಲಬುರಗಿ ಮಠಗಳು ಸಂಸ್ಕಾರ ಕೊಡುವ ಕೇಂದ್ರಗಳಾಗಲಿ: ರಂಭಾಪುರಿ ಜಗದ್ಗುರುಗಳು

ಮಠಗಳು ಸಂಸ್ಕಾರ ಕೊಡುವ ಕೇಂದ್ರಗಳಾಗಲಿ: ರಂಭಾಪುರಿ ಜಗದ್ಗುರುಗಳು

ಅಫಜಲಪುರ ಫೆ-13:ಭಾರತ ಧರ್ಮ ಭೂಮಿ. ಇಲ್ಲಿರುವಷ್ಟು ಮತ ಧರ್ಮಗಳು ಬೇರೆಲ್ಲಿಯೂ ಇಲ್ಲ. ಈ ನಾಡಿನ ಮಠಗಳು ಮತ್ತು ಆಧ್ಯಾತ್ಮಿಕ ನೆಲೆ ಬೀಡುಗಳು ಭಕ್ತರಿಗೆ ಸಂಸ್ಕಾರ ಕೊಡುವ ಸಂಸ್ಕøತಿಯ ಅರಿವನ್ನು ಮೂಡಿಸುವ ಆಧ್ಯಾತ್ಮದ ಕೇಂದ್ರಗಳಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ನೀಲೂರು ಶ್ರೀ ರಾಚೋಟೇಶ್ವರ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಾಳಿಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿ ಮನುಷ್ಯನಿಗೆ ಇರಬೇಕಾಗುತ್ತದೆ. ಜೀವನದ ಜಂಜಡದಲ್ಲಿ ಸಿಲುಕಿರುವ ಮನುಷ್ಯನಿಗೆ ಮಾನಸಿಕ ಶಾಂತಿ ನೆಮ್ಮದಿ ಪ್ರಾಪ್ತವಾಗಲು ಧರ್ಮ ಪರಿಪಾಲನೆ ಬಹಳ ಮುಖ್ಯ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಮಹತ್ವವನ್ನು ಕೊಟ್ಟಿದ್ದಾರೆ. ಜೀವ ಶಿವನಾಗಲು ಅಂಗ ಲಿಂಗವಾಗಲು ನರ ಹರನಾಗಲು ಮತ್ತು ಭವಿ ಭಕ್ತನಾಗಲು ಸಂಸ್ಕಾರ ಅವಶ್ಯಕ. ಮನದ ಶಾಂತಿ ಮತ್ತು ಬದುಕಿನ ಉನ್ನತಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನಾದರ್ಶನದ ಅಮೂಲ್ಯ ಚಿಂತನೆಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ವೀರಶೈವ ಧರ್ಮ ಸಿದ್ದಾಂತದಲ್ಲಿ ಅಷ್ಟಾವರಣ ಪಂಚಾಚಾರ ಮತ್ತು ಷಟ್ಸ್ಥಲಗಳು ಜೀವನದ ವಿಕಾಸಕ್ಕೆ ದಾರಿದೀಪ. ಶ್ರೀ ಗುರುವಿನ ಮೂಲಕ ಅರಿವು ಪಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ನೀಲೂರು ರಾಚೋಟೇಶ್ವರ ಹಿರೇಮಠ ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಲಿಂ. ಶ್ರೀ ಷ||ಬ್ರ|| ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರಿಂದ ತೆರವಾದ ಸ್ಥಾನಕ್ಕೆ ಶಿವಬಸವ ದೇವರನ್ನು ನಿಶ್ಚಯಿಸಿ ಗುರು ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿ ನೂತನ ಶ್ರೀಗಳಿಗೆ ‘ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ದಂಡ ಕಮಂಡಲ ಪಂಚ ಮುದ್ರಾ ಸಮೇತ ಆಶೀರ್ವದಿಸಲಾಗಿದೆ ಎಂದರು. ನೂತನ ಶ್ರೀಗಳಿಗೆ ಶ್ರೀ ರಂಭಾಪುರಿ ಪೀಠದಿಂದ ರೇಶ್ಮೆ ಪೀತಾಂಬರ ಸ್ಮರಣಿಕೆ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಚಿನ್ಮಯಗಿರಿ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ನೂತನ ಶ್ರೀಗಳಿಗೆ ಧಾರ್ಮಿಕ ಸಂಸ್ಕಾರ ನೀಡಿ ಷಟ್ಸ್ಥಲ ಬ್ರಹ್ಮೋಪದೇಶ ಮಾಡಿ ಗುರುತ್ವಾಧಿಕಾರ ಅನುಗ್ರಹಿಸಿದರು. ಪಟ್ಟಾಭಿಷಿಕ್ತರಾದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭಾರತೀಯ ಉತ್ಕøಷ್ಠ ಸಂಸ್ಕøತಿ ಸಕಲರ ಬಾಳಿಗೆ ಬೆಳಕು ಮೂಡಿಸಿದೆ. ಧರ್ಮ ದೇವರು ಮತ್ತು ಗುರು ಇವರಲ್ಲಿ ನಂಬಿಗೆ ಶ್ರದ್ಧೆಯಿಂದ ನಡೆದರೆ ಜೀವನ ಉಜ್ವಲಗೊಳ್ಳುತ್ತದೆ. ಶ್ರೀ ಮಠದ ಪರಂಪರೆ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಬಲದಿಂದ ಎಲ್ಲ ಭಕ್ತರಿಗೆ ಯೋಗ್ಯ ಮಾರ್ಗದರ್ಶನ ಮಾಡುವ ಸಮಾಜದಲ್ಲಿ ಸಾಮರಸ್ಯ ಬೆಳದು ಬರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಂಕಲ್ಪ ಕೈಕೊಂಡರು.
ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಅಫಜಲಪುರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು, ಯಂಕಂಚಿ ರುದ್ರಮುನಿ ಶಿವಾಚಾರ್ಯರು, ಮುಳವಾಡದ ಡಾ.ಸಿದ್ಧಲಿಂಗ ಶಿವಾಚಾರ್ಯರು, ಅರ್ಜುನಗಿ ಮಠದ ಸಂಗನಬಸವ ಶಿವಾಚಾರ್ಯರು, ಬಡದಾಳ ಡಾ.ಚನ್ನಮಲ್ಲ ಶಿವಾಚಾರ್ಯರು, ದೇವಾಪುರ ಶಿವಮೂರ್ತಿ ಶಿವಾಚಾರ್ಯರು, ಸಿಂದಗಿ ಸಾರಂಗಮಠದ ವಿಶ್ವಪ್ರಭು ಶಿವಾಚಾರ್ಯರು, ದೇವರಹಿಪ್ಪರಗಿ ಜಡೆಯಸಿದ್ಧ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಹಲವಾರು ಗಣ್ಯರು ಮತ್ತು ದಾನಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಜೆ 5 ಗಂಟೆಗೆ ನೂತನ ಶ್ರೀಗಳವರ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಕಳೆದ 15 ದಿನಗಳಿಂದ ಜೇರಟಗಿ ಮಡಿವಾಳೇಶ್ವರ ಶಾಸ್ತ್ರಿಗಳಿಂದ ನಡೆದುಕೊಂಡು ಬಂದ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಮಂಗಲ ಸಮಾರಂಭ ನೆರವೇರಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.