
ಕಲಬುರಗಿ, ಫೆ.18: ಕನ್ನಡ ಭಾμÉ ಮತ್ತು ಸಾಹಿತ್ಯವು ಕೇವಲ ಕರುನಾಡು, ಭಾರತಕ್ಕೆ ಸೀಮಿತವಾಗದೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೇ ತಲುಪುವಂತಾಗಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ದಾಕ್ಷಾಯಣಿ ಎಸ್. ಅಪ್ಪ ಅವರು ಆಶಯ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಕನ್ನಡ ಭವನದ ಆವರಣದ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ನಡೆಯುತ್ತಿರುವ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಮಂಗಳವಾರ “ಸಮ್ಮೇಳನಾಧ್ಯಕ್ಷರ ಬದುಕು-ಬರಹ” ವಿಶೇಷ ಉಪನ್ಯಾಸದಲ್ಲಿ ಭಾಗಿಯಾಗಿ ಮಾತನಾಡಿದರು.
ಕನ್ನಡ ಸಾಹಿತ್ಯವನ್ನು ಜಗತ್ತಿನಾದ್ಯಂತ ಪಸರಿಸಲು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ವೈದ್ಯರು, ಇಂಜಿನಿಯರ್‍ಗಳು ಹಾಗೂ ಪ್ರತಿಯೊಬ್ಬ ವಿದ್ಯಾವಂತ ಕನ್ನಡಿಗರು ತಮ್ಮ ವೃತ್ತಿಯ ಜೊತೆಗೆ ಕನ್ನಡ ಸಾಹಿತ್ಯವನ್ನು ಸಂಗ್ರಹಿಸಿ, ಅದನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು ಎಂದು ಹೇಳಿದರು.
ಹಳೆಯ ಬೇರು, ಹೊಸ ಚಿಗುರು ಎನ್ನುವಂತೆ ಹಿರಿಯ ಸಾಹಿತಿಗಳ ಅನುಭವದೊಂದಿಗೆ ಯುವಕರನ್ನು ಪೆÇ್ರೀತ್ಸಾಹಿಸಿ ಕನ್ನಡವನ್ನು ಬೆಳೆಸಬೇಕಿದೆ. ಶರಣರ ಸಾಹಿತ್ಯ ಮಾರ್ಗ ನಮಗೆ ಎಂದಿಗೂ ಆದರ್ಶವಾಗಿದೆ ಎಂದು ತಿಳಿಸಿದರು.
ಪೂಜ್ಯ ಶರಣಬಸಪ್ಪ ಅಪ್ಪ ಮತ್ತು ದೊಡ್ಡಪ್ಪ ಅಪ್ಪ ಅವರು ಕನ್ನಡದ ಮೇಲೆ ಇಟ್ಟಿದ್ದ ಅಪಾರ ಪ್ರೀತಿ ಹಾಗೂ ಕನ್ನಡ ನಾಡು ಕಟ್ಟುವಲ್ಲಿ ಅವರು ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಕಲಬುರಗಿ ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆ ತಾಯಿ ಮನೆಯಂತಿದೆ. ಇಲ್ಲಿನ ಸಿರಿವಂತಿಕೆಯ ಸಾಹಿತ್ಯಿಕ ಪರಂಪರೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕೇವಲ ಚರ್ಚೆಗೆ ಸೀಮಿತವಾಗದೆ ಕ್ರಿಯಾತ್ಮಕವಾಗಿರಬೇಕು. ರೈತರು, ಕಾರ್ಮಿಕರು, ನಿರ್ಗತಿಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಕೆಲಸ ಮಾಡಬೇಕು ಎಂದು ಡಾ.ದಾಕ್ಷಾಯಿಣಿ ಎಸ್. ಅಪ್ಪ ಅವರು ಸಲಹೆ ನೀಡಿದರು.
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್ ಅವರು ಮಾತನಾಡಿ, ಕಲಬುರಗಿಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಮಾಡುವಂತೆ ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಪ್ರಸ್ತಾಪಿಸಿದ್ದು, ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಈ ಭಾಗದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಕಲಬುರಗಿಗೆ ಉಪರಾಜಧಾನಿ ಪಟ್ಟ ಸಿಗಬೇಕೆಂಬ ಕೂಗಿನಲ್ಲಿ ನ್ಯಾಯವಿದೆ. ಈ ಕುರಿತು ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವೆ ಎಂದರು.
ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿದ ಶ್ರೀಶೈಲಂ ಸಾರಂಗಮಠದ ಪೂಜ್ಯ ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಕಲಬುರಗಿ ಜಿಲ್ಲೆ ಭೌಗೋಳಿಕವಾಗಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಗಡಿಗಳಿಗೆ ಹೊಂದಿಕೊಂಡಿರುವುದರಿಂದ, ಇಲ್ಲಿನ ಭಾμÉಯಲ್ಲಿ ಆಯಾ ರಾಜ್ಯಗಳ ಪ್ರಭಾವ ಕಾಣುವುದು ಸಹಜ. ಈ ವಿಭಿನ್ನತೆಯ ನಡುವೆಯೂ ನಮ್ಮದು ಗಂಡು ಮೆಟ್ಟಿದ ನಾಡು. ಬೆಂಗಳೂರಿನವರು ನಮ್ಮ ಭಾμÉಯನ್ನು ನೋಡಿ ನಗಬಹುದು ಆದರೆ ನಮ್ಮ ಭಾμÉಯ ಗತ್ತು ಮತ್ತು ಚೈತನ್ಯವೇ ಬೇರೆ ಎಂದು ಹೆಮ್ಮೆಯಿಂದ ನುಡಿದರು.
ಹಿಂದೆಲ್ಲ ಕಲಬುರಗಿಯಲ್ಲಿ ಕನ್ನಡ ಕಲಿಕೆ ಎಷ್ಟು ಕಷ್ಟಕರವಾಗಿತ್ತೆಂದರೆ ಉರ್ದು ಬೋರ್ಡ್‍ಗಳನ್ನು ಹಾಕಿ ಒಳಗೆ ಕನ್ನಡ ಕಲಿಸುವಂತಹ ಪರಿಸ್ಥಿತಿ ಇತ್ತು. ಅಂತಹ ಕಠಿಣ ಹಾದಿಯನ್ನು ದಾಟಿ ಇಂದು ಕನ್ನಡ ಸ್ವತಂತ್ರವಾಗಿ ಹೆಮ್ಮರವಾಗಿ ಬೆಳೆದಿರುವುದು ಸಂತಸದ ವಿಷಯ ಎಂದರು.
ಕನ್ನಡ ಸಾಹಿತ್ಯಕ್ಕೆ ನಿಜವಾದ ಮೆರುಗು ನೀಡಿದವರು ಬಸವಾದಿ ಶರಣರು. ದಯವೇ ಧರ್ಮದ ಮೂಲವೆಂದು ಸಾರಿದ ಶರಣರ ವಚನಗಳು ಇಂದಿಗೂ ನಮಗೆ ಸ್ಪೂರ್ತಿ. ವಿಜಯಕುಮಾರ್ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಕೆಲಸ ಮಾಡುತ್ತಿದೆ. ಇದು ನಂದಾ ದೀಪದಂತೆ ಪ್ರಜ್ವಲಿಸುತ್ತಿದೆ ಎಂದರು.
ಚಿತ್ತಾಪುರಿನ ನರಸಪ್ಪ ಚಿನ್ನಕಟ್ಟಿ ಅವರು ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಮ್ಮೇಳನಾಧ್ಯಕ್ಷ ಮೂಡಬಿ ಗುಂಡೇರಾವ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಚಿಂಚನಸೂರು ಗ್ರಾಮದಲ್ಲಿ ಪ್ರೌಢಶಾಲೆ ವಿದ್ಯಾಭ್ಯಾಸ ಪೂರೈಸಿದ್ದಾರೆ. ಶರಣಬಸವೇಶ್ವರ ಸಂಸ್ಥೆಯಲ್ಲಿ ಪದವಿ ಪಡೆದ ನಂತರ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಮತ್ತು ಎಂ.ಫಿಲ್ ಪದವಿಗಳನ್ನು ಪಡೆದು ಇತಿಹಾಸ ಪ್ರಾಧ್ಯಾಪಕರಾಗಿ ಸೇಡಂ ತಾಲ್ಲೂಕಿನ ನೃಪತುಂಗ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಇಂದಿನ ಡಿಜಿಟಲ್ ಯುಗದ ಸೌಲಭ್ಯಗಳಿಲ್ಲದ ಅಂದಿನ ದಿನಮಾನದಲ್ಲಿ ಚಿಮಣಿ, ದೀಪದ ಬೆಳಕಿನಲ್ಲಿ ಓದಿ ಬೆಳೆದ ಮುಡಬಿ ಗುಂಡೆರಾವ ಇವರು ಇಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಸುಮಾರು 15ಕ್ಕೂ ಹೆಚ್ಚು ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. 10ಕ್ಕೂ ಹೆಚ್ಚು ಕೃತಿಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಸಂಪಾದಿಸಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಮತ್ತು ಸ್ಮರಣ ಸಂಚಿಕೆಗಳಲ್ಲಿ ಅವರ 100ಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳು ಪ್ರಕಟವಾಗಿವೆ. ಜಾನಪದ ಸಾಹಿತ್ಯದಲ್ಲಿ ಅವರು ತೋರಿರುವ ಆಸಕ್ತಿ ಮತ್ತು ಸಂಶೋಧನಾ ದೃಷ್ಟಿಕೋನವು ಶ್ಲಾಘನೀಯವಾಗಿದೆ ಎಂದರು.
ಸೇಡಂ ನಾಡಿನ ಇತಿಹಾಸ ಮತ್ತು ದರ್ಶನ’ ಎಂಬ ವಿಷಯದ ಮೇಲೆ ಅವರು ಕೈಗೊಂಡಿರುವ ಸಂಶೋಧನೆಗಳು ಅತ್ಯಂತ ಮೌಲ್ಯಯುತವಾಗಿವೆ. ಸುಮಾರು 10 ವರ್ಷಗಳ ಕಾಲ ಸೇಡಂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಇಂದಿಲ್ಲಿ ಸಮ್ಮೇಳನಾಧ್ಯಕ್ಷ ಗೌರವ ನೀಡಲಾಗಿದೆ. ಸರಳ ಸಜ್ಜನಿಕೆಯ ವ್ಯಕ್ತಿಯಾದ ಗುಂಡೇರಾವ್ ಅವರು ಜಿಲ್ಲೆಯ ಸಾಹಿತ್ಯ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ ಚಿಂಚನಸೂರ, ರಾಜ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೇಖಜಿ, ಮಂಜುನಾಥ ನಾಲವರಕರ್, ಗೋಪಾಲ ನಾಟಿಕಾರ, ಗುರು ಬಂಡಿ, ಪ್ರಶಾಂತಗೌಡ ಮಾಲಿಪಾಟೀಲ, ಮಹೇಶ ಧರಿ ಉಪಸ್ಥಿತರಿದ್ದರು. ಅಂಬಾರಾಯ ಮಡ್ಡೆ, ವೆಂಕುಬಾಯಿ ರಜಪೂತ ನಿರೂಪಿಸಿದರು. ಮಂಜುನಾಥ ಕಂಬಾಳಿಮಠ ಸ್ವಾಗತಿಸಿದರು. ಶಕುಂತಲಾ ಪಾಟೀಲ ವಂದಿಸಿದರು.



























