Home ಜಿಲ್ಲೆ ಗಣೇಶೋತ್ಸವದ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಲಿ: ಗಂಗಾಧರ ಕುಲಕರ್ಣಿ

ಗಣೇಶೋತ್ಸವದ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಲಿ: ಗಂಗಾಧರ ಕುಲಕರ್ಣಿ

ಯಾದಗಿರಿ: ಶಿವಸೇನಾ ಕರ್ನಾಟಕ ಸಂಘಟನೆಯ ವತಿಯಿಂದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ತಿಳಿಸಿದರು.

ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು, ರೈತರು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶಿವಸೇನಾ ಕರ್ನಾಟಕ ಧ್ವನಿ ಎತ್ತಲಿದೆ. ಸರ್ಕಾರ ಹಾಗೂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಗಣೇಶೋತ್ಸವದ ಸಂದರ್ಭದಲ್ಲಿ ಗಣೇಶ ಮಂಡಳಿಗಳಿಗೆ ವಿವಿಧ ಷರತ್ತುಗಳನ್ನು ಒಳಗೊಂಡ ನೋಟಿಸ್ ನೀಡಲಾಗುತ್ತಿದ್ದು, ಮಂಡಳಿಗಳ ಯುವ ಕಾರ್ಯಕರ್ತರನ್ನು ಪದೇಪದೇ ಪೊಲೀಸ್ ಠಾಣೆಗೆ ಕರೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

೧೮೯೩ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿದ ಗಣೇಶೋತ್ಸವವು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸಮಾಜವನ್ನು ಸಂಘಟಿಸುವ ಹಬ್ಬವಾಗಿದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಅನುಮತಿಗಾಗಿ ಯುವಕರು ಕೆಲಸ, ಉದ್ಯೋಗ ಹಾಗೂ ವ್ಯಾಪಾರ ಬಿಟ್ಟು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.

ಗಣೇಶೋತ್ಸವಕ್ಕೆ ಸಂಬAಧಿಸಿದAತೆ ೪೬ ಷರತ್ತುಗಳನ್ನು ಒಳಗೊಂಡ ನೋಟಿಸ್ ನೀಡಲಾಗಿದೆ ಎಂದು ಹೇಳಿದ ಅವರು, ಧ್ವನಿ ಮಾಲಿನ್ಯ ನಿಯಮಗಳನ್ನು ವರ್ಷವಿಡೀ ಎಲ್ಲ ಕಾರ್ಯಕ್ರಮಗಳಿಗೂ ಸಮಾನವಾಗಿ ಜಾರಿಗೊಳಿಸಬೇಕು. ಗಣೇಶೋತ್ಸವಕ್ಕೆ ಮಾತ್ರ ಕಠಿಣ ನಿಯಮಗಳನ್ನು ಅನ್ವಯಿಸುವುದು ಸರಿಯಲ್ಲ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸಲು ಶಿವಸೇನೆ ಸಿದ್ಧವಿದೆ. ಆದರೆ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ವಿದ್ಯಾರ್ಥಿಗಳು, ವೃದ್ಧರು ಹಾಗೂ ರೋಗಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಧ್ವನಿವರ್ಧಕ ಬಳಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಡಿಜೆ ಬಳಕೆಗೆ ಸಂಬAಧಿಸಿದAತೆ ನಿಗದಿತ ಡೆಸಿಬಲ್ ಮಿತಿಯನ್ನು ಸ್ಪಷ್ಟಪಡಿಸಿ, ನಿಯಮ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಿ. ಆದರೆ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮವಾಗಿದ್ದರೂ ಒಂದೇ ರೀತಿಯ ನಿಯಮ ಜಾರಿಯಾಗಬೇಕು ಎಂದರು.

ಗಣೇಶ ಮಂಡಳಿಗಳಿಗೆ ನೀಡಿರುವ ನೋಟಿಸ್‌ಗಳು ಹಾಗೂ ಪೊಲೀಸ್ ಕ್ರಮಗಳ ಕುರಿತು ಶಿವಸೇನೆಯ ಕಾನೂನು ಘಟಕದೊಂದಿಗೆ ಚರ್ಚಿಸಲಾಗಿದೆ. ಅಗತ್ಯವಿದ್ದರೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಸೇರಿದಂತೆ ಸಂಬAಧಪಟ್ಟ ಅಧಿಕಾರಿಗಳ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಈ ಸಂಬAಧ ನೋಟಿಸ್‌ಗಳನ್ನು ಸಂಗ್ರಹಿಸಿ ಮುಂದಿನ ಕಾನೂನು ಕ್ರಮಗಳ ಕುರಿತು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಅಗತ್ಯ ನೆರವು ನೀಡಬೇಕು. ಬರಪೀಡಿತ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವುದು, ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವುದು ಸೇರಿದಂತೆ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಕೆಪಿಎಸ್‌ಸಿ ಪರೀಕ್ಷೆ ಹಾಗೂ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳನ್ನು ಚುರುಕುಗೊಳಿಸಿ, ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸಿ, ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುವುದು ಎಂದು ಗಂಗಾಧರ ಕುಲಕರ್ಣಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಸೇನಾ ಕರ್ನಾಟಕದ ರಾಜ್ಯ ಕಾರ್ಯದರ್ಶಿ ವಿಜಯ ಪಾಟೀಲ್, ಜಿಲ್ಲಾಧ್ಯಕ್ಷ ಚನ್ನಬಸಪ್ಪ ಗೌಡ ಕೋಡ್ಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ್ ನಾಯಕ್, ಯುವ ಅಧ್ಯಕ್ಷ ಸಂದೀಪ್ ಮಹೇಂದ್ರಕರ್, ಲಲಿತಾ ಆರ್. ರಾಥೋಡ್, ಹನುಮಂತರಾಯ ಗೌಡ ಪಾಟೀಲ್, ವಿ.ಬಿ. ಹಿರೇಮಠ್ ದಂಡಗುAಡ ಸ್ವಾಮಿಗಳು, ಪ್ರಿತಾ ಪಂಡಿತ್ ಹಾಗೂ ಶಂಕರ್ ಸೋನಾರ್ ಉಪಸ್ಥಿತರಿದ್ದರು.