
ಮಧುಗಿರಿ, ಡಿ. ೧೮- ಪ್ರತಿಯೊಬ್ಬರೂ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾನವರಂತೆ ಬದುಕಬೇಕು ಎಂದು ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಪುರವರ ಹೋಬಳಿ ತಗ್ಗಿಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕೃಷ್ಣ ಆಶ್ರಮದಲ್ಲಿ ನಡೆದ ಶ್ರೀ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ ೫೧ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಾಣಿಗಳಿಗಿಂತ ಮನುಷ್ಯನಿಗೆ ವಿವೇಚನಾ ಶಕ್ತಿಯನ್ನು ನೀಡಿದ್ದಾನೆ. ಅದನ್ನು ಸದುಪಯೋಗಪಡಿಸಿಕೊಂಡು ನಾವು ನಮ್ಮ ಧರ್ಮವನ್ನು ಪಾಲಿಸಬೇಕಿದೆ. ತಂದೆ-ತಾಯಿಯನ್ನು ನೋಡಿಕೊಳ್ಳಬೇಕಾದ ನಮ್ಮ ಧರ್ಮ, ಗುರು ಹಿರಿಯರನ್ನು, ಶಿಕ್ಷಕರನ್ನು ಗೌರವಿಸಬೇಕಾದ್ದು ನಮ್ಮ ಧರ್ಮ. ದೇವರನ್ನು ಪೂಜಿಸಬೇಕಾದ್ದು ಮನುಷ್ಯ ಧರ್ಮ. ಹೀಗಾಗಿ ಧರ್ಮ ಎಂದರೆ ಮನುಷ್ಯನನ್ನು ಅನ್ಯಾಯ, ಅಸತ್ಯ, ಮೋಸದಿಂದ ಪಾರು ಮಾಡಿ ಬದುಕಿಸುವ ಉನ್ನತ ಉದ್ದೇಶದಿಂದ ಪರಮಾತ್ಮ ನಮಗೆ ಆಶೀರ್ವಾದ ಮಾಡಿದ್ದಾನೆ. ಆದ್ದರಿಂದ ನಾವು ಧಾರ್ಮಿಕ ಮತ್ತು ಸಾಮಾಜಿಕ ಸೇವ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾನವರಂತೆ ಬದುಕೋಣ ಎಂದರು.
ತಗ್ಗೀಹಳ್ಳಿ ಆಶ್ರಮದ ಕಣಕಣದಲ್ಲೂ ದೈವಶಕ್ತಿ ತುಂಬಿದೆ. ಹಿಮಾಲಯದಿಂದ ಸಹ ಮಹಾಮಹಿಮರು ಇಲ್ಲಿಗೆ ಬಂದು ಹೋಗುತ್ತಾರೆ. ತಗ್ಗಿಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ೫೧ ವರ್ಷಗಳಿಂದಲೂ ಶ್ರೀ ಬ್ರಹ್ಮಚೈತನ್ಯರ ಆರಾಧನೆಯನ್ನು ನಡೆಸಿಕೊಂಡು ಬರುತ್ತಿರುವ ನೀವು ಮತ್ತು ಇಲ್ಲಿನ ಹಿರಿಯ ಸ್ವಾಮಿಗಳಾದ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿಗಳು ಈಗಿನ ಪೀಠಾಧ್ಯಕ್ಷರಾದ ರಮಾನಂದ ಮಹಾರಾಜ ರವರು ಅಭಿನಂದನಾರ್ಹರು “ಎಂದು ಹೇಳಿದರು.
ಪೂರ್ಣಾಹುತಿಯ ನಂತರ ನಡೆದ ಧಾರ್ಮಿಕ ಸಮಾರಂಭಕ್ಕೆ, ತಗ್ಗಿಹಳ್ಳಿಯ ಶ್ರೀರಾಮಕೃಷ್ಣ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ರಮಾನಂದ ಮಹಾರಾಜ್ ರವರು ಸಮಾರಂಭಕ್ಕೆ ಎಲ್ಲರನ್ನು ಆಹ್ವಾನಿಸಿ, ಆಶ್ರಮ ನಡೆದು ಬಂದ ಬಗೆಯನ್ನು ವಿವರಿಸಿ ಹೇಳಿ ಎಲ್ಲರ ಸಹಕಾರ ಕೋರಿ, ತುಮಕೂರಿನ ಶ್ರೀ ವೀರೇಶಾನಂದ ಸ್ವಾಮಿ ಅವರನ್ನು ಸತ್ಕರಿಸಿದರು .
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಬುದ್ಧಿ ಯೋಗಾನಂದ ಜಿ., ಸೇವಕರ್ತರಾದ ತಗ್ಗೀಹಳ್ಳಿ ಎಂ. ಕುಪೇಂದ್ರಯ್ಯ, ಸುಶೀಲಮ್ಮ ಕೆ. ರಾಮಕೃಷ್ಣ ,ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು.


























