
ದೇವನಹಳ್ಳಿ ಬೆಂ.ಗ್ರಾ ಫೆ.೨೪-ರಾಜ್ಯದ ಶ್ರೀಮಂತ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದಾಯ ಬರಲಿದ್ದು, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಪಂಚಾಯಿತಿ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಅಭಿಪ್ರಾಯ ಪಟ್ಟರು.
ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರ್ತಿಗಾನಹಳ್ಳಿ ಗ್ರಾಮದ ನೂತನ ಶಾಲಾ ಕಟ್ಟಡ ಉದ್ಘಾಟನೆ, ಭುವನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ಕಾಮಗಾರಿ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ಇರುವುದರಿಂದ ಪಂಚಾಯಿತಿಗೆ ಒಳ್ಳೆಯ ಆದಾಯ ಬರುತ್ತದೆ. ಇಲ್ಲಿನ ಸಾಕಷ್ಟು ಸ್ಥಳೀಯ ನಿವಾಸಿಗಳು ಭೂಮಿ ಕಳೆದುಕೊಂಡವರು ಇದ್ದಾರೆ. ಅಂತವರನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು. ಭೂಮಿ ಕಳೆದುಕೊಂಡವರಿಗೆ ವಸತಿ, ಉದ್ಯೋಗ ಕಲ್ಪಿಸುವುದು, ಸ್ವಯಂ ಉದ್ಯೋಗ, ವ್ಯವಹಾರ ಹೊಂದಲು ಉತ್ತೇಜಿಸುವ ಕಾರ್ಯ ಮಾಡಬೇಕು. ಪಂಚಾಯಿತಿಯು ಕೂಡ ಬಂದಂತಹ ಅನುದಾನದಲ್ಲಿ ಸಾಕಷ್ಟು ಒಳ್ಳೆಯ ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದಾರೆ ಎಂದರು.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೊಬ್ಬರೂ ಕೂಡ ಅವಲಂಬಿತ ಜೀವನ ನಡೆಸಬಾರದು, ಎಲ್ಲರೂ ಕೂಡ ಅಭಿವೃದ್ಧಿ ಕಾಣಬೇಕು ಎನ್ನುವುದು ನನ್ನ ಅಭಿಪ್ರಾಯ, ಬಡವರ, ಹಿಂದುಳಿದವರ ಅಭಿವೃದ್ಧಿ ಆಗಬೇಕು. ಬಂದಂತಹ ಅನುದಾನವನ್ನು ಜನಕ್ಕೆ ಯಾವುದು ಒಳ್ಳೆಯದು, ಯಾವುದು ಉಪಯೋಗ, ಶಾಶ್ವತ ಕೆಲಸಗಳು ಯಾವುವು ಎಂಬುದನ್ನು ಕುಲಂಕುಶವಾಗಿ ಪರಿಶೀಲಿಸಿ ಅಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಿ ಎಂದು ಪಂಚಾಯಿತಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಬಯಪ ಅಧ್ಯಕ್ಷರಾದ ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ, ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ, ಆಡಳಿತಾಧಿಕಾರಿ ಸುನಿಲ್, ಪಿಡಿಒ ಗಂಗರಾಜು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.




























