ಬ್ಯಾಂಕುಗಳು ಜನಪರವಾಗಿ ಕಾರ್ಯನಿರ್ವಹಿಸಲಿ

ಗದಗ,ಜ8: ಬ್ಯಾಂಕುಗಳು ಕೇವಲ ಹಣಕಾಸು ಸಂಸ್ಥೆಗಳಲ್ಲ, ಸಮಾಜದ ಆರ್ಥಿಕ ಚಲನೆಗೆ ದಿಕ್ಕು ತೋರಿಸುವ ಪ್ರಮುಖ ಸಂಸ್ಥೆಗಳಾಗಿವೆ. ಬ್ಯಾಂಕುಗಳಲ್ಲಿ ಇರುವ ಹಣ ಸಂಪೂರ್ಣವಾಗಿ ಸಾರ್ವಜನಿಕರದ್ದೇ ಆಗಿದ್ದು, ಆ ಹಣವನ್ನು ಸ್ಥಳೀಯವಾಗಿ ಸದ್ಬಳಕೆ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಹಕಾರ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ ಸಭೆ ಜರುಗಿತು. ಸಭೆಯಲ್ಲಿ ವಿವಿಧ ಬ್ಯಾಂಕುಗಳ ಸಾಲ ವಿತರಣೆ, ಹಣಕಾಸು ಒಳಗೊಳ್ಳಿಕೆ, ಸರ್ಕಾರಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.

ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕು. ಸರ್ಕಾರದ ಜನಪರ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ತಲುಪುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು ಎಂದರು.

“ಬ್ಯಾಂಕುಗಳು ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಬೇಕು. ಲಾಭವೇ ಮುಖ್ಯ ಎಂಬ ಮನೋಭಾವವನ್ನು ಬಿಟ್ಟು, ಬ್ಯಾಂಕುಗಳು ಸ್ಥಾಪನೆಯಾದ ಮೂಲ ಉದ್ದೇಶವನ್ನು ಮೊದಲು ಈಡೇರಿಸಬೇಕು” ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಸಂಗ್ರಹವಾಗುವ ಬ್ಯಾಂಕ್ ಹಣವನ್ನು ಇದೇ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಇದರಿಂದ ಉದ್ಯೋಗ ಸೃಷ್ಟಿ, ವ್ಯಾಪಾರ ವೃದ್ಧಿ ಹಾಗೂ ಗ್ರಾಮೀಣ ಆರ್ಥಿಕ ಬಲವರ್ಧನೆ ಸಾಧ್ಯವಾಗುತ್ತದೆ. ಈ ಮೂಲಕ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು ಎಂದು ಸಂಸದರು ಅಭಿಪ್ರಾಯಪಟ್ಟರು.

ಬೃಹತ್ ಲೋನ್ ಮೇಳಗಳಿಗೆ ಸೂಚನೆ

ರೈತರು, ಮಹಿಳೆಯರು, ಯುವ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ಸುಲಭವಾಗಿ ದೊರಕುವಂತೆ ಬೃಹತ್ ಮಟ್ಟದಲ್ಲಿ ಲೋನ್ ಮೇಳಗಳನ್ನು ಆಯೋಜಿಸಬೇಕು ಎಂದು ಅವರು ಸೂಚಿಸಿದರು. ಸಾಲ ಅರ್ಜಿಗಳ ಪ್ರಕ್ರಿಯೆ ಸರಳವಾಗಿರಬೇಕು. ಅರ್ಹ ಫಲಾನುಭವಿಗಳಿಗೆ ಯಾವುದೇ ಅನಗತ್ಯ ಅಡೆತಡೆ ಆಗಬಾರದು ಎಂದು ಹೇಳಿದರು.

ಬಡತನ ನಿರ್ಮೂಲನೆಗೆ ಹೌಸಿಂಗ್ ಲೋನ್ ಪರಿಣಾಮಕಾರಿ

ಬಡತನ ನಿವಾರಣೆಯಲ್ಲಿ ಹೌಸಿಂಗ್ ಲೋನ್ ಮಹತ್ವದ ಪಾತ್ರ ವಹಿಸುತ್ತದೆ. ಸ್ವಂತ ಮನೆ ಹೊಂದುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಮಟ್ಟ ಸುಧಾರಿಸುತ್ತದೆ. ಈ ಹಿನ್ನೆಲೆಯಲ್ಲಿ ಗೃಹ ಸಾಲ ವಿತರಣೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸದರು ಸಲಹೆ ನೀಡಿದರು.

ಪ್ರಧಾನಮಂತ್ರಿ ಜನಧನ ಯೋಜನೆ, ಮುದ್ರಾ ಸಾಲ, ಸ್ವನಿಧಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಸೇರಿದಂತೆ ಪ್ರಮುಖ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಸಂಸದ ಬೊಮ್ಮಾಯಿ, ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕುಗಳಿಂದ ತಕ್ಷಣದ ಹಾಗೂ ಸುಲಭ ಸಾಲ ಸೌಲಭ್ಯ ಒದಗಿಸುವಂತೆ ಸೂಚಿಸಿದರು.

“ಬ್ಯಾಂಕುಗಳು ಕಚೇರಿಗಳಿಗೆ ಸೀಮಿತವಾಗದೆ ಜನರ ಬಳಿಗೆ ಹೋಗಬೇಕು. ಸಾಲ ಮಂಜೂರಾತಿಯಲ್ಲಿ ವಿಳಂಬವಾಗಬಾರದು. ಅರ್ಹರಿಗೆ ಯಾವುದೇ ಅಡಚಣೆ ಇಲ್ಲದೆ ಸಾಲ ಸೌಲಭ್ಯ ದೊರೆಯಬೇಕು” ಎಂದು ಅವರು ತಿಳಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ.ವಿ. ಮಾತನಾಡಿ ಜಿಲ್ಲೆಯಲ್ಲಿ 31-12-2025 ರ ವರೆಗೆ ಲೀಡ್ ಬ್ಯಾಂಕ್ ನ 183 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 2025 ರವರೆಗೆ ಜಿಲ್ಲೆಯ ಸಾಲ ಠೇವಿ ಅನುಪಾತ 102.18 % ರಷ್ಟಾಗಿರುತ್ತದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಲ ಯೋಜನೆಗಳಾದ ಪ್ರಧಾನಮಂತ್ರಿ ಮುದ್ರಾ ಯೋಜನೆ, ಉದ್ಯೋಗಿನಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ ಅರಸ ಹಿಂದುಳಿದ ಅಭಿವೃದ್ಧಿ ನಿಗಮ, ಕೈಮಗ್ಗ ಮತ್ತು ಜವಳಿ ಇಲಾಖೆಯ, ಜಿ.ಪಂ.ದ ಎನ್.ಆರ್.ಎಲ್, ಎಂ,( ಸ್ವ ಸಹಾಯ ಗುಂಪು) ಪಿಎಂಎವೈ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಪಿಎಂಎಫ್‍ಬಿವೈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ನಬಾರ್ಡದ ಎಜಿಎಂ ಮಯೂರ ಕಾಂಬ್ಳೆ, ಆರ್‍ಬಿಐ ಎಜಿಎಂ, ಸೂರಜ ಎಸ್, ಎಸ್‍ಬಿಐ ದ ರೀಜನಲ್ ಮ್ಯಾನೇಜರ್ ನಾಗಸುಬ್ಬಾರೆಡ್ಡಿ , ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ನ ಅಧಿಕಾರಿಗಳು ಹಾಜರಿದ್ದರು.