Home ಜಿಲ್ಲೆ ಕಲಬುರಗಿ ಮನೆ ಮನೆಗೂ ಅಂಬೇಡ್ಕರ್ ಅರಿವು ಮೂಡಲಿ: ನೆಲೋಗಿ ಶ್ರೀ

ಮನೆ ಮನೆಗೂ ಅಂಬೇಡ್ಕರ್ ಅರಿವು ಮೂಡಲಿ: ನೆಲೋಗಿ ಶ್ರೀ

ಜೇವರ್ಗಿ: ಮೇ.16:ಪುರೋಹಿತಶಾಹಿ ಕಪಿಮುಷ್ಠಿಯಲ್ಲಿ ಸಿಲುಕಿ ಮೂಢನಂಬಿಕೆಗಳಲ್ಲಿ ಮುಳಗಿರುವ ಜನರಿಗೆ ಅಂಬೇಡ್ಕರ್ ಬಗ್ಗೆ ಮತ್ತು
ಸಂವಿಧಾನದ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಆಯೋಜಿಸುವ ಮೂಲಕ ಜನರಲ್ಲಿ ಪ್ರಜ್ಞೆ ತುಂಬಬೇಕು ಎಂದು ನೆಲೋಗಿ ವಿತಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು.
ತಥಾಗತ ಗೌತಮ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಅಂಗವಾಗಿ ಜಯಂತ್ಯುತ್ಸವ ಸಮಿತಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅರಿವು ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

800 ವರ್ಷ ಮೊಗಲರು, 200 ವರ್ಷ ಬ್ರಿಟಿಷ್ ರು ಆಳಿದ ಈ ದೇಶದಲ್ಲಿ ಜಾತಿಯತೆ, ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳು ಉಳಿದುಕೊಂಡು ಬಂದಿದ್ದು, ರಾಮಬಾಣಕ್ಕೆ ಭೀಮಬಾಣವೇ ಮದ್ದು ಎಂದು ತಿಳಿಸಿದರು.

ಮುಖ್ಯ ಭಾಷಣಕಾರರಾಗಿದ್ದ ಸುರೇಶ ಗೌತಮ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತರಿಗಾಗಿ ದುಡಿಯಲಿಲ್ಲ. ಮಹಿಳೆ, ಹಿಂದುಳಿದ ವರ್ಗದವರ ಏಳಿಗೆಗೆ ದುಡಿದರು. ಸ್ವಾತಂತ್ರ್ಯ ಸಂದರ್ಭದಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಬ್ರಿಟಿಷರೇ ಕಾರಣ ಎಂಬಂತಿದ್ದ ಕಾಲದಲ್ಲಿ ಸಮಾಜದಲ್ಲಿನ ಶ್ರೇಣಿಕೃತ ವ್ಯವಸ್ಥೆ ಕೂಡ ಶೋಷಣೆಗೆ ಕಾರಣ ಎಂದು ಅಂತಹ ಅನಿಷ್ಟಗಳ ವಿರುದ್ದ ಡಾ. ಅಂಬೇಡ್ಕರ್ ಅವರು ಹೋರಾಡಿದರು ಎಂದು ತಿಳಿಸಿದರು.

ಅಣದೂರು ಬುದ್ಧ ವಿಹಾರದ ಭಂತೆ ವರಜ್ಯೋತಿ ಇನ್ನಿತರ ಭಂತೇಜಿಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತ ವೀರಶೈವ,ಲಿಂಗಾಯತ ಸಮಾಜದ ರಾಜ್ಯ ಸದಸ್ಯ ರಾಜಶೇಖರ ಸೀರಿ ಮಾತನಾಡಿದರು. ದಸಂಸ ರಾಜ್ಯ ಸಂಚಾಲಕರಾದ ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಜಿಪಂ ಮಾಜಿ ಸದಸ್ಯ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಚನ್ನಮಲ್ಲಯ್ಯ ಹಿರೇಮಠ, ಬಾಪೂಗೌಡ ಪಾಟೀಲ ಬಿರಾಳ, ವಸಂತ ನರಿಬೋಳ, ಕೆರೆಪ್ಪ ಹಿಪ್ಪರಗಿ, ಸುಭಾಷ ಚನ್ನೂರ, ಭೀಮರಾಯ ಜನಿವಾರ ಮತ್ತಿತರರು ವೇದಿಕೆಯಲ್ಲಿದ್ದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಶಾಂತಪ್ಪ ಯಲಗೋಡ, ಡಾ. ಅನಿಲ್ ಟೆಂಗಳಿ, ಡಾ. ಅಶೋಕ ದೊಡ್ಡಮನಿ, ನಿಜಲಿಂಗ ದೊಡ್ಡಮನಿ, ವಿಠಲ್ ಚಿಕಣಿ, ಪಂಡಿತ ಮದಗುಣಕಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಇದೇ ವೇಳೆಯಲ್ಲಿ ವೈದ್ಯಕೀಯ ಕ್ಷೇತ್ರ, ಸಂಗೀತ ಕ್ಷೇತ್ರ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ಪಟ್ಟಣದ ವಿಜಯಪುರ ಕ್ರಾಸ್ ನಿಂದ ಗೌತಮಬುದ್ಧರ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಅಂಬೇಡ್ಕರ್ ಭವನದಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯನ್ನು ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ ಉದ್ಘಾಟಿಸಿದರು.


ಶಾಂತಿ, ಕರುಣೆ, ಸಮಾನತೆ ಕನಸಿದ ಮಹಾನ್ ಸಂತರು.

ಮುಖ್ಯ ಭಾಷಣಕಾರರಾಗಿದ್ದ ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಸಾವಿರ, ಸಾವಿರ ವರ್ಷಗಳ ಅಂತರವಿದ್ದರೂ ಆ ಮೂವರು ಮಹನೀಯರು
ಶಾಂತಿ, ಕರುಣೆ, ಸಮಾನತೆ, ಸ್ವಾತಂತ್ರ್ಯ ಕನಸಿದ ಮಹಾನ್ ಸಂತರು. ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದರೆ, ಆ ದುಃಖಕ್ಕೆ ಮಾನವ ನಿರ್ಮಿತ ಸಾಮಾಜಿಕ ವ್ಯವಸ್ಥೆಯೇ ದುಃಖಕ್ಕೆ ಕಾರಣ ಎಂದು ಬಸವಣ್ಣ ಹೇಳಿದರು. ಇದೆಲ್ಲದಕ್ಕೂ ಶಿಕ್ಷಣವೇ ಅಸ್ತ್ರ ಎಂದು ಅಂಬೇಡ್ಕರ್ ಬೋಧಿಸಿದರು ಎಂದು ಅವರು ಅಭಿಪ್ರಾಯಪಟ್ಟರು.