ಹಾನಗಲ್,ಆ6: ಅಮೆರಿಕಾದ ಬೋಸ್ಟನ್ ನಗರದಲ್ಲಿ ಆರಂಭಗೊಂಡಿರುವ ಪ್ರತಿಷ್ಠಿತ ರಾಷ್ಟ್ರೀಯ ರಾಜ್ಯ ಶಾಸಕಾಂಗ ಸಮ್ಮೇಳನದಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿದ್ದಾರೆ.
ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶ ಹಾಗೂ ರಾಷ್ಟ್ರೀಯ ಶಾಸಕರ ಸಮಾವೇಶ (ಎನ್‍ಎಲ್‍ಸಿ, ಭಾರತ) ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾರತದ 24 ರಾಜ್ಯಗಳ 130 ಕ್ಕೂ ಹೆಚ್ಚು ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದಾರೆ.
ಜಗತ್ತಿನಾದ್ಯಂತ 7 ಸಾವಿರಕ್ಕೂ ಹೆಚ್ಚು ಕಾನೂನು ಪರಿಣಿತರು ರಚಿಸಿರುವ ಆಡಳಿತದಲ್ಲಿ ಎಐ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವುದು, ಸೈಬರ್ ಭದ್ರತೆ, ಮತದಾರರ ನಂಬಿಕೆ ಮತ್ತು ನೀತಿಗಳಲ್ಲಿ ನವೀನತೆ ಸೇರಿದಂತೆ ಇನ್ನೂ ಅನೇಕ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಸಮ್ಮೇಳನದಲ್ಲಿ ಅಧಿವೇಶನಗಳು ನಡೆಯಲಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಣಕಾರರು, ಪರಿಣಿತರು ವಿಷಯ ಮಂಡಿಸಲಿದ್ದಾರೆ.
ವಿಧಾನಸಭೆ ಸಭಾಪತಿ ಯು.ಟಿ.ಖಾದರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ರಾಜ್ಯದ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
































