ಫಲ ಪುಷ್ಪ ಪ್ರದರ್ಶನದಲ್ಲಿ ಕಾನೂನು ಅರಿವು ಜಾಗೃತಿ

ಕೋಲಾರ,ಜ.೨೭- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ, ಕೆ.ಜಿ.ಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾನೂನು ಅರಿವು ನೆರವಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.


ದಿನಾಂಕ ೨೬, ೨೭,೨೮ ಮೂರು ದಿನಗಳ ಕಾಲ ಕೋಲಾರ ನಗರದ ತೋಟಗಾರಿಕೆ ಆವರಣದಲ್ಲಿ ಫಲ ಪುಷ್ಪ ಪ್ರದರ್ಶನದ ಕಾರ್ಯಕ್ರಮದ ಒಂದು ಮಳೆಗೆಯಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವನ್ನು ಒಂದು ಮಳಿಗೆಯಲ್ಲಿ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿತ್ತು.


ಹಿರಿಯ ನ್ಯಾಯಾಧೀಶರು ಹಾಗೂ ಹಾಗೂ ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಟೇಶ್ ಆರ್ ಕೋಲಾರ ಜಿಲ್ಲೆಯ ಸಾರ್ವಜನಿಕರು ಮತ್ತು ನಾಗರೀಕ ರೈತಪಿ ವರ್ಗಗಳಿಗೆ ಕಾನೂನು ಅರಿವು ನೆರವಿನ ಬಗ್ಗೆ ಜಾಗೃತಿ ಮೂಡಿಸಿದರು. ಶುಲ್ಕವಿಲ್ಲದ ಕಾನೂನು ನೆರವು ಮತ್ತು ಸಲಹೆಗಳನ್ನು ನೀಡುವುದರ ಜೊತೆಗೆ, ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಮತ್ತು ಲೋಕ ಅದಾಲತ್ ಮೂಲಕ ನ್ಯಾಯಾಲಯಗಳಲ್ಲಿ ಅಥವಾ ಇತರೆ ಕಚೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವುದು ಹಾಗೂ ಎಲ್ಲ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಸೇವಾ ಸಮಿತಿಯ ಉದ್ದೇಶವಾಗಿರುತ್ತದೆ ಎನ್ನುವ ವಿಚಾರಗಳ ಸಲಹೆಯನ್ನು ತಿಳಿಸಿಕೊಟ್ಟರು.


ಇದರ ಜೊತೆಗೆ ಯಾವುದೇ ಭಾಗದಲ್ಲಿ ಜನಸಾಮಾನ್ಯರಾದ ತಮಗೆ ಯಾವುದೇ ವಿಧವಾದ ತೊಂದರೆಯಾದರೂ ಉಚಿತ ಸಹಾಯವಾಣಿ ಸಂಖ್ಯೆ ೧೫೧೦೦ ಗೆ ಕರೆ ಮಾಡಿ ಸಲಹೆಯನ್ನು ಪಡೆಯುವುದಲ್ಲದೆ ನಿಮ್ಮ ಸಮೀಪದ ನ್ಯಾಯಾಲಯದ ಆವರಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ಅಥವಾ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಬಹುದು ಎಂದು ವಿವರಿಸಿದರು.


ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಕೋಲಾರದ ಶಾಸಕರಾದ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್, ಜಿಲ್ಲಾಧಿಕಾರಿಗಳಾದ ಎಂ.ಆರ್ ರವಿ,ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಬಾಗೇವಾಡಿ, ತೋಟಗಾರಿಕೆ ಉಪ ನಿರ್ದೇಶಕ ಕುಮಾರಸ್ವಾಮಿ, ಜಿಲ್ಲಾ ಮಟ್ಟದ ಅನೇಕ ಅಧಿಕಾರಿಗಳು, ಸಾರ್ವಜನಿಕರು, ನ್ಯಾಯಾಧೀಶರ ಕಾನೂನು ಅರಿವು ನೆರವಿನ ಸಲಹೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.