
ಕೋಲಾರ, ಜೂ,೧೮- ವಿದ್ಯಾರ್ಥಿಗಳು ತಂಬಾಕು,ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗದಿರಿ ಗುಣಮಟ್ಟದ ಶಿಕ್ಷಣದೊಂದಿಗೆ ಗುರುಹಿರಿಯರಿಗೆ ಗೌರವ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ನಟೇಶ್ ಕರೆ ನೀಡಿದರು.
ನಗರದ ಆರ್‌ವಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರಸಂಘದಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಬಾಲ್ಯವಿವಾಹ, ಮಾದಕ ವಸ್ತುಗಳ ನಿರ್ಮೂಲನೆ ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಯುವಕರು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವಂತೆ ಸಮಾಜಕ್ಕೆ ಸಂದೇಶಗಳನ್ನು ನೀಡುವಂತಾಗಬೇಕು ಎಂದರು.
ಚಾಕೋಲೇಟ್‌ಗಳಲ್ಲಿ ಹೇರಾಯಿನ್, ಕೋಕಾ, ಮುಂತಾದ ಅಮಲು, ನಿಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ ಕೊನೆಗೆ ಅವರನ್ನು ಸಮಾಜಘಾತುಕ, ಕಾನೂನು ಬಾಹಿರಾ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ವಿಷಾದಿಸಿದರು.
ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕೆ ಹೊರತು ಅವುಗಳಿಂದ ಹಾದಿ ತಪ್ಪುವಂತಾಗಬಾರದು. ಪುಸ್ತಕಗಳನ್ನು ಹೆಚ್ಚಾಗಿ ಓದುವ ಮೂಲಕ ಜ್ಞಾನ ಪಡೆಯಿರಿ ಎಂದರು. ಇದೇ ಸಂದರ್ಭದಲ್ಲಿ ಎನ್‌ಎಲ್‌ಎಸ್‌ಎ ಸಹಾಯವಾಣಿ ೧೫೧೦೦ ಬಳಕೆ ಕುರಿತು ನ್ಯಾಯಾಧೀಶರು ಮಾಹಿತಿ ನೀಡಿದರು.
ವಕೀಲ ಜಿ.ವಿ.ಗೋಪಾಲರೆಡ್ಡಿ ಮಾತನಾಡಿ,ಶಾಲೆ ಕಾಲೇಜು ಆವರಣದಿಂದ ೨೦೦ ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದೆ, ಒಂದೆರಡು ವರ್ಷ ಕಷ್ಟಪಟ್ಟು ಓದಿ ಇಡೀ ಜೀವನ ಸುಖಕರವಾಗಿರುವಂತೆ ಬಾಳಿ, ಕೇವಲ ಕ್ಷಣಿಕ ಸುಖದ ಆಸೆಗಾಗಿ ದುಶ್ಚಟಗಳಿಗೆ ಬಲಿಯಾದರೆ ಇಡೀ ಜೀವನ ನರಕವಾದೀತು ಎಂದರು.
ಉಪಪ್ರಧಾನ ಕಾನೂನು ನೆರವು ಅಭಿರಕ್ಷಕ ಸತೀಶ್ ಮಾತನಾಡಿ, ವಿದ್ಯಾರ್ಥಿ ಯುವಜನತೆ ದಾರಿ ತಪ್ಪಿದರೆ ಅದು ದೇಶಕ್ಕೆ ಮಾರಕ ಮಾತ್ರವಲ್ಲ ಅವರು ಬದುಕು ನರಕವಾಗುತ್ತದೆ, ಅಪರಾಧಿಗಳಾಗಿ ಜೈಲು ಸೇರಿ ಶಿಕ್ಷೆ ಅನುಭವಿಸಬೇಕಾಗುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾನೂನು ಪಾಲಿಸಿ ನೆಮ್ಮದಿನ ಜೀವನ ನಡೆಸುವ ಸಂಕಲ್ಪ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲೆ ವೇಧಾಶೇಖರ್ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ನೀವು ಇಲ್ಲಿ ಬದುಕು ರೂಪಿಸಿಕೊಳ್ಳುವ ಆಲೋಚನೆ ಮಾಡಿ, ಶ್ರಮವಹಿಸಿ ಓದಿ ಅದು ಬಿಟ್ಟು ದುಶ್ಚಟಗಳಿಗೆ ದಾಸರಾಗಿ ಇಡೀ ನಿಮ್ಮ ಜೀವನ ನಾಶಮಾಡಿಕೊಳ್ಳಲು ನೀವೇ ಕಾರಣರಾಗದಿರಿ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ನಿಷೇಧ ಹಾಗೂ ಬಾಲ್ಯವಿವಾಹ ತಡೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಅರೆಕಾಲಿಕ ಕಾನೂನು ಸ್ವಯಂಸೇವಕರಾದ ಗಮನ ಸಂಸ್ಥೆಯ ಶಾಂತಮ್ಮ ಮಾತನಾಡಿ, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆದೂಡುತ್ತಿದ್ದು, ಇದರ ವಿರುದ್ದ ಮಕ್ಕಳು ಉಚಿತ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಜರಿದ್ದು, ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.