
ಕೋಲಾರ, ಫೆ.೧೫- ಸರ್ಕಾರಿ ಶಾಲೆಗಳ ಮಕ್ಕಳು ಕೀಳಿರಿಮೆ ತೊರೆದು ಶೈಕ್ಷಣಿಕ ಮುಖ್ಯವಾಹಿನಿಗೆ ಬನ್ನಿ, ನಿಮ್ಮ ನೆರವಿಗೆ ನಾವಿದ್ದೇವೆ, ನಿಮ್ಮ ಶಾಲೆಗಳ ಆಧುನಿಕತೆಗೆ ಕೈಲಾದಷ್ಟು ನೆರವು ನೀಡುತ್ತೇವೆ ಎಂದು ಎಪ್ಸನ್ ಇಂಡಿಯ ಪ್ರೈವೇಟ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಸಿಂಗ್ ಕರೆ ನೀಡಿದರು.
ಕೋಲಾರ ಜಿಲ್ಲೆಯ ಹುದುಕುಳ ಸರ್ಕಾರಿ ಶಾಲೆಯಲ್ಲಿ ಎಪ್ಸನ್,ಐ.ಎಲ್.ಪಿ ಮತ್ತು ಶಿಕ್ಷಕ ಗೆಳೆಯರ ಬಳಗದ ಸಹಕಾರದಲ್ಲಿ ಸುಮಾರು ನಲವತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್, ಲೈಬ್ರರಿ ಮತ್ತು ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಪ್ಸನ್ ಇಂಡಿಯ ಸಾಕಷ್ಟು ಕೆಲಸ ಮಾಡಿತ್ತಿದೆ ವಿದ್ಯಾರ್ಥಿಗಳಿಗೆ ಮಾಡಿರುವ ಈ ಸ್ಮಾರ್ಟ್ ಕ್ಲಾಸ್, ಲೈಬ್ರರಿ ಮತ್ತು ವಿಜ್ಞಾನ ಲ್ಯಾಬ್‌ನ ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದ ಅವರು, ಜಿಲ್ಲೆಯ ೩೯ ಶಾಲೆಗಳಿಗೆ ಈ ಸೌಲಭ್ಯ ನೀಡಿದ್ದೇವೆ ಎಂದರು.
ಕೋಲಾರ ಜಿಲ್ಲೆಯ ಮುವತ್ತಾರು ಸಾವಿರ ಮಕ್ಕಳಿಗೆ ಪ್ರತಿ ವರ್ಷನೋಟ್ ಪುಸ್ತಕ ನೀಡಲಾಗುತ್ತಿದೆ ಅದರ ಜೊತೆಗೆ ಈ ವರ್ಷ ಒಂದರಿಂದ ಐದನೇ ತರಗತಿಗೆ ಬ್ಯಾಗ್ ಸಹ ವಿತರಿಸಲಾಗುವುದು ಎಂದರು.
ಬಿ.ಇ.ಒ ಶಶಿಕಲ ಮಾತನಾಡಿ ಎಪ್ಸನ್ ಮತ್ತು ಗೆಳೆಯರ ಬಳಗ ನಮ್ಮ ಬಂಗಾರಪೇಟೆ ತಾಲ್ಲೂಕಿನ ಶೇ ೯೦% ಶಾಲೆಗಳಲ್ಲಿ ಕುಡಿಯುವ ನೀರಿನ ವಾಟರ್ ಫಿಲ್ಟರ್ ಅಳವಡಿಸಿದ್ದಾರೆ ಜೊತೆಗೆ ಈಗ ಹನ್ನೆರಡು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಲೈಬ್ರರಿ ಹಾಗೂ ವಿಜ್ಞಾನ ಲ್ಯಾಬ್‌ಗಳನ್ನ ಮಾಡಿದ್ದಾರೆ ಅವರಿಗೆ ಇಲಾಖೆ ವತಿಯಿಂದ ಧನ್ಯವಾದಗಳು ಎಂದರು.
ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಗತ್ಯವಾದ ಬ್ಯಾಗ್,ನೋಟ್ ಪುಸ್ತಕ ಮಾತ್ರವಲ್ಲ, ನೀವು ಆರೋಗ್ಯದಿಂದಿರಲು ಅಗತ್ಯವಾದ ಶುದ್ದ ನೀರಿನ ಘಟಕಗಳನ್ನು ಒದಗಿಸಿದ್ದೇವೆ, ಮತ್ತಷ್ಟು ನೆರವುಒದಗಿಸಲು ನಾವು ಬದ್ದರಿದ್ದು, ನಿಮ್ಮಿಂದ ಉತ್ತಮ ಫಲಿತಾಂಶ ನಿರೀಕ್ಷೆ ಮಾತ್ರ ನಮ್ಮದಾಗಿದೆ ಎಂದು ತಿಳಿಸಿದರು.
ಐ.ಎಲ್.ಪಿ ಸಂಸ್ಥೆಯ ಮುಖ್ಯಸ್ತರಾದ ರಂಗರಾಜನ್ ಮಾತನಾಡಿ, ಭಾರತ ಹಳ್ಳಿಗಳ ದೇಶ ಹಳ್ಳಿಗಳಿಂದ ಬರುವ ಮಕ್ಕಳಿಗೆ ಇಂತಹ ಸೌಲಭ್ಯಗಳು ದೊರೆಯಬೇಕು ಹಾಗಾದಲ್ಲಿ ಮಾತ್ರ ನಗರ ಪ್ರದೇಶದ ಮಕ್ಕಳ ಜೊತೆ ಪೈಪೋಟಿ ನೀಡಲು ಸಾಧ್ಯ ಎಂದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣವಿದೆ, ಸಂಸ್ಕಾರ ಕಲಿಸುವ ಅರ್ಹ ಶಿಕ್ಷಕರಿದ್ದಾರೆ, ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳತ್ತ ಮುಖ ಮಾಡದಿರಿ, ಸಣ್ಣವಯಸ್ಸಿನಲ್ಲೇ ಕಲಿಸುವ ಶಿಸ್ತು ಜೀವನಕ್ಕೆ ಅಡಿಪಾಯವಿದ್ದಂತೆ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಶಿಸ್ತು, ಸ್ವಚ್ಛತೆ ಬೆಳೆಸಿದರೆ ಅವರು ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಕ ಬಳಗ ಹುಟ್ಟಿ ಇಪ್ಪತ್ತು ವರ್ಷಗಳಾಯಿತು ಈ ಇಪ್ಪತ್ತು ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಪ್ಸನ್ ಇಂಡಿಯದ ವಿಜಯ್‌ಗೋವಿಂದ್ ,ಐ.ಎಲ್.ಪಿ ಯ ಹರೀಶ್ ,ಶ್ರೀನಿವಾಸಪುರ ನೌಕರರ ಸಂಘದ ಅಧ್ಯಕ್ಷ ಬೈರೇಗೌಡ,ಗೆಳೆಯರ ಬಳಗದ ಚಂದ್ರಪ್ಪ ,ವೆಂಕಟರಾಮ್ ,ಶ್ರೀನಿವಾಸಮೂರ್ತಿ, ಶ್ರೀನಿವಾಸ್ ಮೊದಲಾದವರು ಇದ್ದರು. ಕಾರ್ಯಕ್ರಮವನ್ನು ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ ನಿರೂಪಿಸಿ, ಬಳಗ ಹಲವು ಕಂಪನಿಗಳ ನೆರವಿನಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ವಿವರ ನೀಡಿದರು. ಜಿಲ್ಲೆಯ ಮುವತ್ತೊಂಬತ್ತು ಶಾಲೆಗಳ ಶಿಕ್ಷಕರು ಹಾಜರಿದ್ದರು.



























