ಚರ್ಮದ ಪಾದರಕ್ಷೆ ಪ್ರಸಂಗ ಕಲ್ಯಾಣ ಕ್ರಾಂತಿಗೆ ಕಿರೀಟ

ಬೀದರ್:ಅ.4: ತಾನು ನಂಬಿದ ತತ್ವಕ್ಕೆ ತನ್ನ ಮೈ ಚರ್ಮದಿಂದಲೇ ಪಾದರಕ್ಷೆ ಅರ್ಪಿಸಿದ ಪ್ರಸಂಗ ಕಲ್ಯಾಣ ಕ್ರಾಂತಿಯ ಕಿರೀಟ ಎಂದು ಪರುಷ ಕಟ್ಟೆಯ ಚನ್ನಬಸವಣ್ಣ ಬಣ್ಣಿಸಿದರು.
ನಗರದ ಬಸವಗಿರಿಯಲ್ಲಿ ಈಚೆಗೆ ನಡೆದ ಒಂಬತ್ತು ದಿನಗಳ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅನುಭಾವ ಮಂಡಿಸಿದರು.
ಹರಳಯ್ಯ-ಕಲ್ಯಾಣಮ್ಮ ದಂಪತಿ ಗುರುವಿನ ಋಣಭಾರ ಇಳಿಸಲು ತಮ್ಮ ತೊಡೆಯ ಚರ್ಮದ ಸುಂದರ ಪಾದರಕ್ಷೆ ತಯಾರಿಸಿ ಬಸವ ಗುರುವಿಗೆ ಸಮರ್ಪಿಸಿದರು. ಆದರೆ, ಬಸವಣ್ಣನವರು ಅವುಗಳನ್ನು ಧರಿಸಲಿಲ್ಲ ಎಂದು ತಿಳಿಸಿದರು.
ಶರಣರ ಚಮ್ಮಾವಿಗೆಗೆ ಪ್ರಥ್ವಿ ಸಮ ಬಾರದು. ಇವು ಪಾದದಲ್ಲಿ ಧರಿಸಲಾಗವು. ಪೂಜೆಗೆ ಯೋಗ್ಯವಾದವು ಎಂದು ಬಸವಣ್ಣನವರು ತಲೆ ಮೇಲಿಟ್ಟುಕೊಂಡು ಗದ್ಗದಿತರಾದರು ಎಂದು ಹೇಳಿದರು.
ಹರಳಯ್ಯ-ಕಲ್ಯಾಣಮ್ಮರಂಥ ಭಕ್ತರು, ಬಸವಣ್ಣನವರಂಥ ಗುರು ಬಲು ಅಪರೂಪ. ಚರ್ಮದ ಪಾದರಕ್ಷೆ ಪ್ರಸಂಗ ಜಗತ್ತಿನ ಇತಿಹಾಸದಲ್ಲಿ ಬೇರೆಲ್ಲೂ ಸಿಗದು. ಇದು ಮಾನವೀಯತೆಯ ಮಹಾಸಿದ್ಧಿಗೆ ಕಾರಣವಾಯಿತು. ಶರಣರ ತ್ಯಾಗ, ಬಲಿದಾನಗಳನ್ನು ನಮ್ಮ ಪೀಳಿಗೆ ಎಂದೆಂದಿಗೂ ಮರೆಯಲಾಗದು ಎಂದು ತಿಳಿಸಿದರು.
ನೀಲಮ್ಮನ ಬಳಗದ ಸಂಗೀತಾ ಆರ್. ಪಾಟೀಲ ಮಾತನಾಡಿ, ಲಿಂಗಾಯತ ಧರ್ಮ ಸ್ಥಾಪಿಸಿದ ಬಸವಣ್ಣ ಕಾಯಕ-ದಾಸೋಹಗಳಿಗೆ ಪಟ್ಟಗಟ್ಟಿ ಶ್ರೇಷ್ಠ ಆರ್ಥಿಕ ತಜ್ಞ ಎನಿಸಿದರು. ಆರ್ಥಿಕ ರಂಗದಲ್ಲಿಯೂ ಅವರ ಕ್ರಾಂತಿಯಿಂದ ಸಮೃದ್ಧಿ ನೆಲೆಸಿತು ಎಂದು ಹೇಳಿದರು.
ಗಳಿಸುವ ಕಲೆಯ ಜತೆಗೆ ಬಳಸುವ ಸೂಕ್ತ ಮಾರ್ಗವನ್ನೂ ತೋರಿಸಿರುವುದು ಬಸವಣ್ಣನವರ ನಡೆ ಕಾರ್ಲಮಾಕ್ರ್ಸ್‍ಗಿಂತ ಮುಂದಿತ್ತು ಎನ್ನುವುದಕ್ಕೆ ನಿದರ್ಶನ ಎಂದು ತಿಳಿಸಿದರು.
ಎಲ್ಲರೂ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅಕ್ಕ ಅನ್ನಪೂರ್ಣತಾಯಿ ಅವರು ದೀಕ್ಷೆ, ಮದುವೆ, ಶಾಲು, ಕಿರುಗುಣಿ, ತೊಟ್ಟಿಲು ಮೊದಲಾದ ಕಾರ್ಯಕ್ರಮಗಳನ್ನು ಶರಣ ತತ್ವದಂತೆ ಆಚರಣೆಗೆ ತಂದು ಬಸವ ತತ್ವ ಪ್ರಸಾರಕರಿಗೆ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ ರಮೇಶ ಮಠಪತಿ ಮಾತನಾಡಿ, ಕಲ್ಯಾಣ ಕ್ರಾಂತಿಯು ಕೊನೆಯ ಘಟ್ಟದಲ್ಲಿ ವಿಪ್ಲವದಲ್ಲಿ ಕೊನೆಗೊಂಡಿತು. ಕಲ್ಯಾಣ ಹೊತ್ತಿ ಉರಿಯಿತು. ಅನೇಕ ಶರಣರು ಪ್ರಾಣ ಕಳೆದುಕೊಂಡರು. ಬಹಳಷ್ಟು ವಚನಗಳು ಬೆಂಕಿಗೆ ಆಹುತಿಯಾದವು ಎಂದು ತಿಳಿಸಿದರು.
ಇಂದು ವಚನಗಳು ಹೆಚ್ಚೆಚ್ಚು ಚರ್ಚೆಗೆ ಬರುತ್ತಿವೆ. ವಿಧಾನಸೌಧ, ಸಂಸತ್ತಿನಲ್ಲಿ ವಚನಗಳು ಮಾರ್ದನಿಸುತ್ತಿವೆ. ನ್ಯಾಯಾಲಯದಲ್ಲಿ ಉಲ್ಲೇಖಿಸಲ್ಪಡುತ್ತಿವೆ. ಲಂಡನ್‍ನಲ್ಲಿ ಬಸವ ಪ್ರತಿಮೆ ಸ್ಥಾಪನೆಯಾಗಿದೆ ಎಂದು ಹೇಳಿದರು.
ದೇಶ, ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಶರಣರ ವಚನಗಳ ಅಧ್ಯಯನ ನಡೆದಿದೆ. ಪ್ರಪಂಚದ ಎಲ್ಲ ಭಾಷೆಗೂ ವಚನಗಳು ತರ್ಜುಮೆಯಾಗುತ್ತಿವೆ. ಕಲ್ಯಾಣ ಕ್ರಾಂತಿಯ ಸ್ಮರಣೆಗೆ ಪ್ರತಿ ವರ್ಷ ಕಲ್ಯಾಣ ಕ್ರಾಂತಿ ವಿಜಯೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅಕ್ಕ ಅನ್ನಪೂರ್ಣತಾಯಿ ಇದಕ್ಕೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.
ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಬಸವಣ್ಣನವರ ತತ್ವಗಳೇ ಬೇಕು ಎಂದು ಹೇಳಿದರು.
ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ, ಜಿಲ್ಲಾ ಪಂಚಾಯಿತಿ ನಿವೃತ್ತ ವ್ಯವಸ್ಥಾಪಕ ಉಮೇಶ ಪಾಟೀಲ, ನಿವೃತ್ತ ಶಿಕ್ಷಕ ವೈಜಿನಾಥ ಹುಣಸಗೇರೆ, ಪ್ರಥಮ ದರ್ಜೆ ಗುತ್ತಿಗೆದಾರ ಆರ್.ಕೆ. ಪಾಟೀಲ ಇದ್ದರು.
ವಿದ್ಯಾವತಿ ಪ್ರವೀಣ್ ವಚನ ನೃತ್ಯ ಪ್ರದರ್ಶಿಸಿದರು. ಶ್ರೀದೇವಿ ಎಸ್.ಎಂ. ಕ್ರಾಂತಿ ಗೀತೆ ಹಾಡಿದರು. ಚಂದ್ರಕಾಂತ ಪಟ್ನೆ, ರೇವಣಪ್ಪ ಮೂಲಗೆ, ಶ್ಯಾಮಲಾ ಎಲಿ ವಚನ ಗಾಯನ ಮಾಡಿದರು. ನಿಷ್ಕಲ ಚನ್ನಬಸಪ್ಪ ನಿರೂಪಿಸಿದರು. ರೋಹಿತ್ ಮಾಣಿಕಪ್ಪ ಖಂಡ್ರೆ ವಂದಿಸಿದರು. ಭಾರತಿ ಮಾಣಿಕಪ್ಪ ಖಂಡ್ರೆ ಭಕ್ತಿ ದಾಸೋಹ ನೆರವೇರಿಸಿ, ವಚನ ಪಠಣ ಮಾಡಿಸಿದರು.