Home ಜಿಲ್ಲೆ ತುಮಕೂರು ಹುದ್ದೆ ನೇಮಕಾತಿಯಲ್ಲೂ ಒಳಮೀಸಲಾತಿ ಜಾರಿಯಾಗಲಿ ಅಧಿವೇಶನದಲ್ಲಿ ಚರ್ಚೆಗೆ ಸುರೇಶ್‌ಗೌಡಗೆ ಮುಖಂಡರ ಮನವಿ

ಹುದ್ದೆ ನೇಮಕಾತಿಯಲ್ಲೂ ಒಳಮೀಸಲಾತಿ ಜಾರಿಯಾಗಲಿ ಅಧಿವೇಶನದಲ್ಲಿ ಚರ್ಚೆಗೆ ಸುರೇಶ್‌ಗೌಡಗೆ ಮುಖಂಡರ ಮನವಿ

ತುಮಕೂರು, ಮಾ. ೭- ಹುದ್ದೆಗಳ ನೇಮಕಾತಿಯಲ್ಲೂ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕೋರಿ ಮಾದರ ಮಹಾಸಭಾದ ಮುಖಂಡರು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ರವರಿಗೆ ಮನವಿ ಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಪರಿಶಿಷ್ಟ ಜಾತಿಯಲ್ಲಿರುವ ೧೦೧ ಕೋಮುಗಳಿಗೆ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ೩೫ ವರ್ಷಗಳಿಂದ ಮಾದಿಗ ಸಮುದಾಯದಿಂದ ಹೋರಾಟ ನಡೆಯುತ್ತಿದೆ. ಇದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ೦೧-೦೮- ೨೦೨೪ ರಂದು ಸ್ಪಷ್ಟ ಆದೇಶ ನೀಡಿ ಆಯಾ ರಾಜ್ಯ ಸರ್ಕಾರಗಳೇ ಪರಿಶಿಷ್ಟ ಜಾತಿಯಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ದತ್ತಾಂಶಗಳನ್ನು ಕ್ರೂಢೀಕರಣ ಮಾಡಿ ಅದರ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸುವಂತೆ ತಿಳಿಸಿದೆ ಎಂದು ವಿವರಿಸಿದರು.


ಈ ಸಂಬಂಧ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಆಯೋಗ ರಚನೆ ಮಾಡಿ ಅವರಿಂದ ಪಡೆದ ವರದಿಯ ಆಧಾರದ ಮೇಲೆ ಮಾದಿಗ ಸಂಬಂಧಿತ ಜಾತಿಗಳಿಗೆ ೬, ಹೊಲೆಯ ಸಂಬಂಧಿತ ಜಾತಿಗಳಿಗೆ ೬ ಮತ್ತು ಸ್ಪೃಶ್ಯ ಜಾತಿಗಳೊಂದಿಗೆ ಅಲೆಮಾರಿ ಜನಾಂಗಗಳನ್ನು ಸೇರಿಸಿ ೫ರ ಅನುಪಾತದಲ್ಲಿ ಒಳಮೀಸಲಾತಿ ಜಾರಿ ಮಾಡಲು ತೀರ್ಮಾನ ಮಾಡಿತ್ತು. ಆದರೆ ಮೀಸಲಾತಿ ಪ್ರಮಾಣ ಶೇ. ೫೦ಕ್ಕಿಂತ ಜಾಸ್ತಿ ಆಗದಂತೆ ಉದ್ಯೋಗ ನೇಮಕಾತಿ ಮಾಡಬೇಕೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿರುವುದರಿಂದ, ಅದರಂತೆಯೇ ಶೇ. ೫೦ರ ಅಡಿಯಲ್ಲಿ ಪರಿಶಿಷ್ಟ ಜಾತಿಯ ಶೇ. ೧೫ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಕಲ್ಪಿಸುವಂತೆ ಮಾದಿಗ ಸಮುದಾಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ವೈ.ಹೆಚ್.ಹುಚ್ಚಯ್ಯ ಹೇಳಿದರು.


ಆದರೆ ೨೭.೨.೨೦೨೬ ರಂದು ಸರ್ಕಾರ ಒಳಮೀಸಲಾತಿ ಜಾರಿಯನ್ನು ಕೈಬಿಟ್ಟು ೫೬೪೩೨ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿರುವುದರಿಂದ ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಅದರಲ್ಲೂ ಮಾದಿಗ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ. ಆದ್ದರಿಂದ ಸರ್ಕಾರ ಈ ಅನ್ಯಾಯವನ್ನು ಸರಿಪಡಿಸಿ ೫೬೪೩೨ ಹುದ್ದೆಗಳ ನೇಮಕಾತಿಯಲ್ಲಿಯೇ ಒಳಮೀಸಲಾತಿ ಜಾರಿ ಮಾಡಿ ನ್ಯಾಯ ಒದಗಿಸಬೇಕು. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಿ, ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಶಾಸಕ ಬಿ.ಸುರೇಶ್‌ಗೌಡ ರವರಿಗೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಕರ್ನಾಟಕ ಮಾದರ ಮಹಾಸಭಾ ರಾಜ್ಯ ಕಾರ್ಯಕಾರಣಿ ಸದಸ್ಯ ನರಸಿಂಹಮೂರ್ತಿ, ಜಿಲ್ಲಾ ಖಜಾಂಚಿ ಸಿ.ಗಂಗರಾಜು, ತುಮಕೂರು ತಾಲ್ಲೂಕು ಅಧ್ಯಕ್ಷ ಹೆಚ್.ಎ.ಆಂಜಿನಪ್ಪ, ಕಾರ್ಯದರ್ಶಿ ಎಲ್.ವಿ.ದಾಸಪ್ಪ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.