ನೂತನ ಕಟ್ಟಡಗಳ ಕಾಮಗಾರಿಗಳ ಶಂಕು ಸ್ಥಾಪನೆ

ಹುಬ್ಬಳ್ಳಿ, ಡಿ.18: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ, ಉಪಹಾರ ಗೃಹ, ಅನೆಕ್ಸ ಕಟ್ಟಡ, ಅತಿಥಿ ಗೃಹ ಹಾಗೂ ಬಾಲಕಿಯರ ವಸತಿ ನಿಲಯ ಕಟ್ಟಡಗಳ ಕಾಮಗಾರಿಗಳನ್ನು ರೂ.37 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು 11 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು. ಸ್ವಂತ ಸಂಪನ್ಮೂಲಗಳ ಬಳಕೆಯಿಂದ ಅಭಿವೃದ್ಧಿಗೆ ಕಾನೂನು ವಿಶ್ವವಿದ್ಯಾಲಯ ಮುಂದಾಗಿದೆ ಎಂದು ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದರು.

ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಕಾಮಗಾರಿಗಳನ್ನು ನೀಡಿದ ಕಾಲಾವಕಾಶದಲ್ಲಿ ಮುಕ್ತಾಯಗೊಳಿಸುವ ಸಾಮಥ್ರ್ಯ ಏಜೆನ್ಸಿಗಳಿಗೆ ಇದೆ. ಕಾಮಗಾರಿಗಳನ್ನು ಕೈಗೊಂಡ ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆಗಳು, ಸಮಸ್ಯೆಗಳು ಉಂಟಾದರೆ ಕೂಡಲೇ ನನಗೆ ಅಥವಾ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಕಾಮಗಾರಿಯಲ್ಲಿ ವಿನಾಕಾರಣ ವಿಳಂಬವಾಗಬಾರದು ಎಂದು ಅವರು ತಿಳಿಸಿದರು.

ಆಡಳಿತ ಭವನ ಕಟ್ಟಡ ಮೇ ತಿಂಗಳಲ್ಲಿ ಮುಕ್ತಾಯಗೊಳಿಸಿ
ಈಗಾಗಲೇ ವಿಶ್ವವಿದ್ಯಾಲಯದ ಆಡಳಿತ ಭವನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಎರಡು ಸ್ಲಾಬ್ ಕಾಮಗಾರಿಗಳು ಪೂರ್ಣಗೊಂಡಿವೆ. ಮಾಹಿತಿ ಕೊರತೆಯಿಂದ 20 ದಿನಗಳ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಯಲ್ಲಿ ವಿಳಂಬವಾದ ಅವಧಿಯನ್ನು ಸರಿಪಡಿಸಿಕೊಂಡು ಮೇ ತಿಂಗಳಲ್ಲಿ ಕಟ್ಟಡವನ್ನು ಮುಕ್ತಾಯಗೊಳಿಸಬೇಕು. ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷವನ್ನು ಆಡಳಿತ ಭವನದಿಂದ ಆರಂಭಿಸಲು ಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಮಹಾಪೌರ ಜ್ಯೋತಿ ಪಾಟೀಲ, ಪಾಲಿಕೆಯ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ, ಪಾಲಿಕೆ ಸದಸ್ಯೆ ನೀಲ್ಲಮ್ಮ ಯಲ್ಲಪ್ಪ ಅರವಾಳದ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭವಾನಿ ನೇರಳೆ, ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಗೀತಾ ಕೌಲಗಿ, ಮೌಲ್ಯಮಾಪನ ಕುಲಸಚಿವೆ ಪೆÇ್ರ.(ಡಾ) ರತ್ನಾ ಆರ್. ಭರಮಗೌಡರ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿ.ಡಿ. ಕಾಮರಡ್ಡಿ, ಚಿದಾನಂದ ಪಾಟೀಲ, ಸ್ಥಾನಿಕ ಅಭಿಯಂತರರಾದ ಅಶ್ವಥನಾರಾಯಣ ಎಂ.ಹೊನಕೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಆರ್.ಎಂ.ಕುಲಕರ್ಣಿ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿದ್ಯಾ ಪರಿಷತ್ತಿನ ಸದಸ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.(ಡಾ) ಸಿ.ಬಸವರಾಜು ಸ್ವಾಗತಿಸಿದರು.