
ಭಾಲ್ಕಿ:ಜೂ.10: ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಜೋಡೆತ್ತುಗಳಿದ್ದಂತೆ. ಇವರಿಬ್ಬರ ಪರಸ್ಪರ ಸಹಕಾರ ಮತ್ತು ಸಮನ್ವಯದ ನಡಿಗೆಯಿಂದ ಮಾತ್ರ ಸಾರ್ವಜನಿಕರಿಗೆ ನಿಷ್ಪಕ್ಷಪಾತ ಹಾಗೂ ಶೀಘ್ರ ನ್ಯಾಯದಾನದ ಗಾಡಿಯನ್ನು ಮುನ್ನಡೆಸಲು ಸಾಧ್ಯ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ ರಾಚೋಟೆ ಅಭಿಪ್ರಾಯಪಟ್ಟರು.
ತಾಲೂಕು ವಕೀಲರ ಸಂಘದ ಸಭಾ ಭವನದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಕಿರಿಯ ಶ್ರೇಣಿ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಶ್ರೇಣಿ ನ್ಯಾಯಾಧೀಶ ರಾಜಶೇಖರ ಹೊಸೂರು ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿದರು.
ಸನ್ಮಾನ ಸ್ವೀಕರಿಸಿ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಮಾತನಾಡಿ, ತಾಲೂಕಿನ ವಕೀಲರ ವೃತ್ತಿಪರತೆ ಮತ್ತು ಇಲ್ಲಿನ ಅತ್ಯುತ್ತಮ ನ್ಯಾಯ ಸೇವೆಯನ್ನು ನೋಡಿ ನನಗೆ ಅಪಾರ ಸಂತೋಷವಾಗಿದೆ. ಇಲ್ಲಿನ ವಕೀಲರ ಸಂಘದ ಸಹಕಾರ ಸ್ಮರಣೀಯ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಮಕರಂದ ಮಾನಕಾರಿ, ಪ್ರಧಾನ ಕಾರ್ಯದರ್ಶಿ ವಾಗೇಶ ಪಾಟೀಲ್, ಜಂಟಿ ಕಾರ್ಯದರ್ಶಿ ನೀಲಕಂಠ ಬಿರಾದಾರ್ ಸೇರಿದಂತೆ ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಹಾಜರಿದ್ದರು.





























