ಅಮಾನಿಕೆರೆ ಕಲ್ಯಾಣಿಯಲ್ಲಿ ಅದ್ದೂರಿ ಸತ್ಯಗಣಪತಿ ವಿಸರ್ಜನೆ

ತಿಪಟೂರು, ನ. ೨೬- ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಆಗಸ್ಟ್ ೨೭ ರಂದು ಗಣೇಶ ಚತುರ್ಥಿ ದಿನದಂದು ಪ್ರತಿಷ್ಠಾಪನೆಗೊಂಡಿದ್ದ ೯೬ನೇ ವರ್ಷದ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


ನಗರದಲ್ಲಿ ಎರಡು ದಿನಗಳ ಕಾಲ ನಡೆದ ೯೬ನೇ ವರ್ಷದ ಸತ್ಯ ಗಣಪತಿ ವಿಸರ್ಜನಾ ಮಹೋತ್ಸವ ಕಾರ್ಯಕ್ರಮ ನಗರದ ಅಮಾನಿಕೆರೆಯ ಕಲ್ಯಾಣಿಯಲ್ಲಿ ಲಕ್ಷಾಂತರ ಭಕ್ತರ ನಡುವೆ ಅಮೋಘ ಸಿಡಿಮದ್ದಿನ ಶಬ್ದದಲ್ಲಿ ೯೦ ದಿನಗಳಿಂದ ಪೂಜಿಸಲ್ಪಟ್ಟ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.


ಆಸ್ಥಾನ ಮಂಟಪದಿಂದ ಹೊರಟ ಮೆರವಣಿಗೆ ದೊಡ್ಡಪೇಟೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನ ರಸ್ತೆ, ಕೋಟೆ, ನೀಲಕಂಠಸ್ವಾಮಿ ಸರ್ಕಲ್ ಮುಖಾಂತರ ಗಾಂಧೀನಗರ, ಕಾರೋಷೇನ್ ರಸ್ತೆ, ರಾಮಮಂದಿರ ರಸ್ತೆ, ರೈಲ್ವೆ ನಿಲ್ದಾಣದ ರಸ್ತೆಯ ಮುಖಾಂತರ ಸಿಂಗ್ರೀ ನಂಜಪ್ಪ ವೃತ್ತದಿಂದ ಹಿಡಿದು ಡಾ.ಬಿ.ಆರ್.ಆಂಬೇಡ್ಕರ್ ವೃತ್ತದಿಂದ ತಿರುಗಿ ಅಮಾನಿಕೆರೆಯ ಬಳಿಯವರೆಗೆ ಮೆರವಣಿಗೆ ನಡೆಯಿತು.


ಮೆರವಣಿಗೆಯಲ್ಲಿ ಸತ್ಯಗಣಪತಿಗೆ ಕೊಬ್ಬರಿ ಹಾರ, ಕಿತ್ತಳೆ, ಸೇಬು, ಕಜ್ಜಾಯ, ದಪ್ಪ ಸೇವಂತಿಗೆ ಹಾರ, ಚಕ್ಕುಲಿ ಹಾರ, ಕರುಕಡುಬು ಹಾರ, ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ಮಾಡಿದ ಬಾರಿ ಗಾತ್ರದ ಹಾರಗಳು ಸೇರಿದಂತೆ ವಿವಿಧ ಬಗೆಯ ದೊಡ್ಡ ಹಾರಗಳನ್ನು ಭಕ್ತರು ಸಮರ್ಪಸಿದರು. ಪ್ರತಿ ಅಂಗಡಿಗಳ ಮುಂದೆ ಮಾವಿನ ತೋರಣ, ಬಾಳೆಗಿಡಗಳ ಅಲಂಕಾರದೊಂದಿಗೆ ಭಕ್ತಿಯ ಅನ್ನದಾನ, ಫಲಹಾರ, ಮಜ್ಜಿಗೆ, ಪಾಯಸವನ್ನು ನೀಡಲಾಯಿತು, ನೂರಾರು ತೆಂಗಿನ ಕಾಯಿಯ ಈಡುಗಾಯಿ, ನಗರದ ರಸ್ತೆಯ ಮೇಲೆ ವಿವಿಧ ಬಣ್ಣ ಬಣ್ಣದ ರಂಗೋಲಿ ಚಿತ್ರಗಳು ವಿಶೇಷವಾಗಿದೆ.


ಅದ್ದೂರಿ ಗಣೇಶೋತ್ಸವದಲ್ಲಿ ನಾಡಿನ ಹೆಸರಾಂತ ಕಲಾ ತಂಡಗಳ ಸಾಂಸ್ಕೃತಿಕ ವೈಭವ ಬಿಂಬಿಸುವ ಕೋಲಾಟ, ವೀರಗಾಸೆ ಕುಣಿತ, ನಂದಿಧ್ವಜ ಕುಣಿತ, ಕೇರಳದ ಚಂಡೆ ವಾಧ್ಯ, ಹುಲಿ ಕುಣಿತ, ಭದ್ರಕಾಳಿ ಕುಣಿತ, ಕೀಲು ಕುದುರೆ. ಕುದುರೆ ಸವಾರಿ, ಡೊಳ್ಳು ಕುಣಿತ, ನಾದಸ್ವರ, ಭಕ್ತರ ಮನ ಕುಣಿಸುವ ಡಿ,ಜೆ, ಶಬ್ದ, ನಾದನ. ಮತ್ತು ಕೇರಳದ ಸಿಡಿಮದ್ದಿನ ನಡುವೆ ಮೆರವಣಿಗೆ ಮಹೋತ್ಸವ ನಡೆಯಿತು.


ಮಹೋತ್ಸವಕ್ಕೆ ನಗರದ ತುಂಬಾ ದೀಪಾಲಂಕಾರ, ಕೇಸರಿ ಧ್ವಜಗಳು, ಗೋಡೆ ಅಲಂಕಾರ, ವಿವಿಧ ಸಂಘ ಸಂಸ್ಥೆಗಳು ಶುಭಕೋರುವ ಬಿತ್ತಿಚಿತ್ರಗಳು, ಈ ಬಾರಿ ಬಲು ಆಕರ್ಷಣೆಗೊಂಡಿರುವ ೫೫ ಅಡಿ ಎತ್ತರ ೨೨ ಅಡಿ ಅಗಲದ ಬೃಹತ್ ಹನುಮ ಮಹಾದ್ವಾರ ಎಲ್ಲರ ಗಮನ ಸೆಳೆದಿದೆ.


ಮಹೋತ್ಸವಕ್ಕೆ ಅಲ್ಲಲ್ಲಿ ದೊಡ್ಡದಾದ ಸದ್ದು ಮಾಡುವ ಡಿ,ಜೆಯ ಶಬ್ಧಕ್ಕೆ ಯುವಕ ಯುವತಿಯರು ಸೇರಿದಂತೆ ಮಹಿಳೆಯರು ಪುರುಷರು ಮನಬಂದಂತೆ ಕುಣಿದು ಕುಪ್ಪಳಿಸಿದರು, ಮನರಂಜನೆಗಾಗಿ ಬೃಹದಾಕಾರದ ಜಾಯಿಂಟ್ ಚಕ್ರ, ದೋಣಿಕಾರದ ತೋಗೋಯ್ಯಾಲೆ, ಉಗಿಬಂಡಿ ಆಟ, ನೀರಾಟ, ವಿವಿಧ ರೀತಿಯ ಆಟಿಕೆಗಳು, ಸಿಹಿತಿಂಡಿಗಳ ಅಂಗಡಿಗಳು ಎಲ್ಲರನ್ನು ಆಕರ್ಷಿಸಿದರು.


ಲಕ್ಷಾಂತರ ಜನ ಸೇರಿದ ಮಹೋತ್ಸವಕ್ಕೆ ಬಿಗಿ ಬಂದೋಬಸ್ತ್‌ಗಾಗಿ ಕೇಂದ್ರವಲಯದ ಐಜಿಪಿ ಲಾಬೂರಾಮ್ ನಗರವನ್ನು ಪರಿವೀಕ್ಷಣೆ ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ರವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜಯಲಕ್ಷಮ್ಮ ಸದಾಶಿವು ನೇತೃತ್ವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ೧೫೦೦ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಯನ್ನು ಆಯೋಜಿಸಲಾಗಿತ್ತು.


ತಾಲ್ಲೂಕು ಆಡಳಿತ, ಹಾಗೂ ನಗರಸಭೆ, ಬೆಸ್ಕಾಂ ಸಿಬ್ಬಂದಿಗಳು ಅಪಾರ ಶ್ರಮವಹಿಸಿದರು.