Home ಜಿಲ್ಲೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ

ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ

ಮುದ್ದೇಬಿಹಾಳ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಅರವಿಂದ ಹೂಗಾರ ಮಾತನಾಡಿ, ಸರ್ಕಾರದ ಆದೇಶದಂತೆ ಈ ಬಾರಿ ರೈತರಿಗೆ ಬಿತ್ತನೆ ಬೀಜಗಳನ್ನು ಕ್ಯೂಆರ್ ಕೋಡ್ ಮೂಲಕ ವಿತರಿಸಲಾಗುತ್ತಿದೆ. ರೈತರು ಗರಿಷ್ಠ ೫ ಎಕರೆ ಪ್ರದೇಶದವರೆಗೆ ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಡಲೆ ಬೆಳೆಯ ಜೆಜಿ-೧೧ ಹಾಗೂ ಹಿಂಗಾರಿ ಜೋಳದ ಎಂ-೩೫-೧ ತಳಿಗಳ ಕುರಿತು ಮಾಹಿತಿ ನೀಡಿದ ಅವರು, ಈ ತಳಿಗಳಿಗೆ ರೈತರ ವಂತಿಕೆ ಮತ್ತು ಸರ್ಕಾರದ ಸಹಾಯಧನದ ವಿವರಗಳನ್ನು ತಿಳಿಸಿದರು.
ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸ್ತುತ ೨೫೦ ಕ್ವಿಂಟಾಲ್ ಕಡಲೆ ಹಾಗೂ ೮.೪೦ ಕ್ವಿಂಟಾಲ್ ಹಿಂಗಾರಿ ಜೋಳದ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಹಾಯಧನದಲ್ಲಿ ಪ್ರಮಾಣೀಕೃತ ಬಿತ್ತನೆ ಬೀಜ ಪಡೆಯಲು ಕಡ್ಡಾಯವಾಗಿ ಎಫ್‌ಐಡಿ ಹಾಗೂ ಜಾತಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.
ಪ್ರಮಾಣೀಕೃತ ಬೀಜಗಳನ್ನು ರೈತರು ಸಂರಕ್ಷಿಸಿ, ಬೆಳೆ ಬೆಳೆದ ನಂತರ ಮುಂದಿನ ಎರಡು ವರ್ಷಗಳವರೆಗೆ ಬಿತ್ತನೆಗೆ ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೈತರಾದ ಪರುತಯ್ಯ ಹಿರೇಮಠ, ನಿಂಗನಗೌಡ ಹುಣಸ್ಯಾಳ, ಯಲ್ಲನಗೌಡ ಬಿರಾದಾರ, ಬಸವರಾಜ ಬಿದರಕುಂದಿ, ಭೀಮಸಿಂಗ್ ಲಮಾಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.