
ಕಲಬುರಗಿ:ಮೇ.3: ನಗುವದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಘಾತವಾಗುವ ಸಂಭವನೀಯತೆ ಕಡಿಮೆಯಾಗುತ್ತದೆ. ದೈಹಿಕ, ಮಾನಸಿಕ ಆರೋಗ್ಯವೃದ್ಧಿಯಾಗುತ್ತದೆ. ಮಾನಸಿಕವಾಗಿ ನೆಮ್ಮದಿ, ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ ಎಂದು ಖ್ಯಾತ ಹಾಸ್ಯ ಕಲಾವಿದ ರಾಜು ಹೆಬ್ಬಾಳ ಅಭಿಮತಪಟ್ಟರು.
ನಗರದ ಖೂಬಾ ಪ್ಲಾಟ್‍ನ ಲಾಹೋಟಿ ಅಪಾರ್ಟ್‍ಮೆಂಟ್‍ನ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಬೆಳಿಗ್ಗೆ ಜರುಗಿದ ‘ವಿಶ್ವ ನಗುವಿನ ದಿನಾಚರಣೆ’ಯಲ್ಲಿ ಸತ್ಕಾರ ಸ್ವೀಕರಿಸಿ, ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವಿದ್ದ ಕಾರಣ ಮನೆಯಲ್ಲಿರುವ ಹಿರಿಯರಾದ ಅಜ್ಜ ಹಾಗೂ ಅಜ್ಜಿ ಮಕ್ಕಳು, ಮೊಮ್ಮಕ್ಕಳಿಗೆ ಬಾಲ್ಯದಿಂದಲೇ ಅನೇಕ ಹಾಸ್ಯ ನೀತಿ ಕಥೆಗಳನ್ನು ಹೇಳುವದರಿಂದ ಆರಂಭದಿಂದಲೇ ಹಾಸ್ಯ ಪ್ರವೃತ್ತಿ ಬೆಳೆಯುತ್ತಿತ್ತು. ಆದರೆ ಈಗ ಇದೆಲ್ಲವೂ ಮಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಳಗದ ಅಧ್ಯಕ್ಷ, ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಇಂದಿನ ಆಧುನಿಕ ಒತ್ತಡದ ಕಾಲದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿರುವ ನಗು ಮಾಯವಾಗಿ, ಅಶಾಂತಿಯನ್ನು ಎದುರಿಸುತ್ತಿದ್ದೇವೆ. ಜೀವನದಲ್ಲಿರುವ ಬರುವ ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಇರುವುದರಲ್ಲಿಯೇ ತೃಪ್ತಿ ಕಾಣುವ ಸ್ವಭಾವ ನಮ್ಮದಾಗಬೇಕು. ‘ಹಸನ್ಮುಖಿ ಸದಾಸುಖಿ’ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜಮುಖಿ ವೈದ್ಯ ಡಾ.ರಾಜಶೇಖರ ಪಾಟೀಲ, ಸಮಾಜ ಸೇವಕ ಲಕ್ಷ್ಮೀಕಾಂತ ಜೋಳದ, ನ್ಯಾಯವಾದಿ ಸಿದ್ದು ಹರಕಂಚಿ, ಪ್ರಮುಖರಾದ ಶರಣು ತಮ್ಮಾಣಿ, ದಿಲಿಪ್ ಹುಲಿಹಳ್ಳಿ, ಭಾಗ್ಯಶ್ರೀ ಆರ್.ಹೆಬ್ಬಾಳ, ಅಕ್ಷತಾ, ರಾಹುಲ್, ರಕ್ಷಿತಾ ಸೇರಿದಂತೆ ಇನ್ನಿತರರಿದ್ದರು.
























