Home ಜಿಲ್ಲೆ ತಡರಾತ್ರಿ ಕರೆಂಟ್ ಶಾರ್ಟ್ ಸಕ್ರ್ಯೂಟ್ ಹಾಗೂ ಸಿಲಿಂಡರ್ ಸ್ಫೋಟ; ಮನೆ ಭಸ್ಮ, ಲಕ್ಷಾಂತರ ರೂ. ನಷ್ಟ

ತಡರಾತ್ರಿ ಕರೆಂಟ್ ಶಾರ್ಟ್ ಸಕ್ರ್ಯೂಟ್ ಹಾಗೂ ಸಿಲಿಂಡರ್ ಸ್ಫೋಟ; ಮನೆ ಭಸ್ಮ, ಲಕ್ಷಾಂತರ ರೂ. ನಷ್ಟ

ಯಾದಗಿರಿ:ಮೇ.26: ಜಿಲ್ಲೆಯ ಮುಂಡರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಿಗೇರಾ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಕರೆಂಟ್ ಶಾರ್ಟ್ ಸಕ್ರ್ಯೂಟ್ ಹಾಗೂ ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿ, ಕುಟುಂಬಸ್ಥರು ಅಪಾರ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸಿರುವ ಘಟನೆ ನಡೆದಿದೆ.

ಗ್ರಾಮದ ನಿವಾಸಿಗಳಾದ ಹನುಮಂತಿ ಗಂಡ ಮೋನಪ್ಪ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ?5 ಲಕ್ಷ ನಗದು ಹಣ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು, ದವಸಧಾನಿಗಳು, ಗೃಹೋಪಯೋಗಿ ವಸ್ತುಗಳು, ಬಟ್ಟೆಗಳು ಹಾಗೂ ಇತರೆ ಅಗತ್ಯ ಸಾಮಗ್ರಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.

ತಡರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಇಡೀ ಮನೆಯನ್ನು ಆವರಿಸಿತು. ಬೆಂಕಿಯ ಜ್ವಾಲೆ ಮತ್ತು ಸಿಲಿಂಡರ್ ಸ್ಫೋಟದ ಸದ್ದಿನಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಮನೆಯೊಳಗಿನ ಬಹುತೇಕ ವಸ್ತುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ರಾಜು ಕುಲಕರ್ಣಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮೀಣ ಪೆÇಲೀಸ್ ಠಾಣೆಯ ಎಎಸ್‍ಐ ಮತ್ತು ಜಮಾದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ದುರ್ಘಟನೆಯಿಂದ ಕುಟುಂಬ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.