
ಕಲಬುರಗಿ:ಜ.28: ಅಪ್ರತಿಮ ಸ್ವಾತಂತ್ರ ಹೋರಾಟಗಾರ ಲಾಲಾ ಲಜಪತರಾಯರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ನಿರಂತರವಾಗಿ ಹೋರಾಡಿದ್ದಾರೆ. ಅಲ್ಲದೆ ದೇಶದಲ್ಲಿದ್ದ ಬಡತನ, ನಿರುದ್ಯೋಗ, ಅಸ್ಪøಶ್ಯತೆಯಂತಹ ಮುಂತಾದ ಸಮಸ್ಯೆಗಳ ನಿರ್ಮೂಲನೆಗಾಗಿ ಶ್ರಮಿಸಿದ್ದಾರೆ. ದೇಶಕ್ಕೆ ಶಿಕ್ಷಣ ಅಗತ್ಯವೆಂದು ಸಾರಿ, ರಾಷ್ಟ್ರೀಯ ಶಿಕ್ಷಣದ ರೂವಾರಿ ಎನಿಸಿಕೊಂಡ ಧೀಮಂತ ವ್ಯಕ್ತಿ ಅವರಾಗಿದ್ದಾರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ‘ಲಾಲಾ ಲಜಪತರಾಯ ಮತ್ತು ಕೆ.ಎಂ.ಕರಿಯಪ್ಪ ಅವರ ಜನ್ಮದಿನೋತ್ಸವ’ದಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿರುವ ಸಮಸ್ಯೆಯನ್ನು ಕುರಿತಂತೆ ಆಳವಾಗಿ ಚಿಂತಿಸಿದ ಲಜಪತರಾಯರು, ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದಾರೆ. ಶೈಕ್ಷಣಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿದವರಲ್ಲಿ ಅಗ್ರಗಣ್ಯರು. ವಿದೇಶಗಳಿಗೆ ತೆರಳಿ ಅಲ್ಲಿನ ಶಿಕ್ಷಣ ಪದ್ಧತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ನಮ್ಮ ದೇಶಕ್ಕೆ ಹೊಂದಿಕೆಯಾಗುವಂತೆ, ಶಿಕ್ಷಣ ಪದ್ಧತಿಯನ್ನು ರೂಪಿಸಿದರು ಎಂದರು.
ಜನರಲ್ ಕೆ.ಎಂ.ಕರಿಯಪ್ಪನವರು ಭಾರತೀಯ ಸೇನಾಪಡೆಯ ಪ್ರಥಮ ಮಹಾದಂಡನಾಯಕರಾಗಿ, ಅಪ್ರತಿಮ ಶೂರ, ಧೀರ ಕಾರ್ಯಪ್ಪನವರು ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ನಮ್ಮ ನಾಡಿನ ಹೆಮ್ಮೆಯ ಮಹಾನ ಚೇತನವಾಗಿದ್ದು, ಸಮಸ್ಥ ಕನ್ನಡಿಗರೆಲ್ಲರೂ ಅಭಿಮಾನ ಪಡುವ ಸಂಗತಿಯಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ, ಶಿಕ್ಷಕಿ ಮಂಜುಳಾ ಬಿ.ನರೋಣಾ, ಪ್ರಮೋದ ಹಾಗೂ ವಿದ್ಯಾರ್ಥಿಗಳಿದ್ದರು.


























