
ಸಂಜೆ ವಾಣಿ ವಾರ್ತೆ
ಜಮಖಂಡಿ:ನ.೦೩:ತಾಲೂಕಿನ ಕಲ್ಲಹಳ್ಳಿ ಗ್ರಾಮದ ವೀರಭದ್ರೇಶ್ವರ ಜಾತ್ರಾಮಹೋತ್ಸವ ಹಾಗೂ ಲಕ್ಷ ದೀಪೊತ್ಸವ ಕಾರ್ಯಕ್ರಮ ನವೆಂಬರ ೪ ಮಂಗಳವಾರ ನಡೆಯಲಿದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ರುದ್ರಯ್ಯ ಕರಡಿ ತಿಳಿಸಿದರು. ಶನಿವಾರ ನಗರದ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಲ್ಲಹಳ್ಳಿಯ ೧೪ನೇ ಶತಮಾನದ ವೀರಭದ್ರೇಶ್ವರ ಹಾಗೂ ಕಾಳಿಕಾದೇವಿಯ ಪುರಾತನ ದೇವಸ್ಥಾನವಿದ್ದು, ಪ್ರತಿವರ್ಷ ಗೌರಿಹುಣ್ಣಿವೆಯ ದಿನ ದಂದು ಜಾತ್ರೆ ನಡೆಯುತ್ತದೆ. ಈ ವರ್ಷ ಲೋಕ ಕಲ್ಯಾಣಾರ್ಥವಾಗಿ ಲಕ್ಷ ದೀಪೊತ್ಸವ ಹಾಗೂ ಧರ್ಮಸಭೆ ಏರ್ಪಡಿಸಲಾಗಿದೆ. ೧೦ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮಿಗಳು ಬಂಡಿಗಣಿಯ ದಾನೇಶ್ವರ ಸ್ವಾಮಿಗಳು, ಬಬಲಾಧಿ ಮಠದ ಶಿವಯೋಗಿ ಸ್ವಾಮಿಗಳು, ಹಿಪ್ಪರಗಿಯ ಪ್ರಭುಜೀ ಮಹಾರಾಜರು, ಮಧುರಖಂಡಿಯ ದುಂಡೇಶ್ವರ ಸ್ವಾಮಿಗಳು, ಕನ್ನೂರಿನ ಸೋಮನಾಥ ಶಿವಾಚಾರ್ಯರು, ಓಲೇಮಠದ ಆನಂದ ದೇವರು ಸಿದ್ಧಮುತ್ಯಾ ಮುಂತಾದ ೮ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಾಸಕ ಜಗದೀಶ ಗುಡಗುಂಟಿ, ಲೊಕಸಭಾ ಸದಸ್ಯ ಪಿ.ಸಿ.ಗದ್ದಿಗೌಡ, ಮಾಜಿ ಸಚಿವೆ ಉಮಾಶ್ರೀ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಮಾಜಿ ಶಾಸಕರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ತಿಮ್ಮಪ್ಪ ಉಪ್ಪಲದಿನ್ನಿ, ಸಂಜಯ ಕಂಕಣವಾಡಿ, ಬಸಯ್ಯ ಹಿರೇಮಠ ಇದ್ದರು.

























