
ನವಲಗುಂದ,ಫೆ5 : ಕುಡಿಯುವ ನೀರಿನ ಕೆರೆಗಳು ಗ್ರಾಮೀಣ ಜನತೆಯ ಜೀವನಾಡಿಯಾಗಿವೆ. ಅವರ ಆಶಯದಂತೆ ಅವುಗಳನ್ನು ಪುನಶ್ಚೇತನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೇಸಿಗೆ ಸಮಯದಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿಯು ಪ್ರತಿ ದಿನ ಹಳ್ಳಿ ಮತ್ತು ಪಟ್ಟಣ ಪ್ರದೇಶ ಗಳಲ್ಲಿ ಕಂಡುಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೆರೆಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಹೇಳಿದರು.
ಅವರು ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಸರ್ಕಾರಿ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾಮಗಾರಿ ಪ್ರಯುಕ್ತ ಗ್ರಾಮ ಪಂಚಾಯತ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಲೋಚನೆ ಸಭೆ ಉದ್ಘಾಟಿಸಿ ಮಾತನಾಡಿದರು.
ನೂತನವಾಗಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕೆಂಪೇಗೌಡ ಪಾಟೀಲ ಹಾಗೂ ಪದಾಧಿಕಾರಿಗಳಾಗಿ ಮಹಾದೇವಗೌಡ ಮುಲ್ಕಿಪಾಟೀಲ, ಷಣ್ಮುಖಪ್ಪ ಜಾವೂರ, ರಾವಸಾಹೇಬ ದೇಸಾಯಿ, ವೀರಪ್ಪ ಅಡ್ಡೋಣಗಿ, ಶ್ರೀನಿವಾಸ ಮಲ್ಲಪ್ಪ ಹೊಸಮನಿ, ಈರಪ್ಪ ಹಾವೇರಿ ಆಯ್ಕೆಯಾದರು.
























