ಕುಣಿಗಲ್, ಸೆ. ೧೮- ಕುಣಿಗಲ್‌ನ ದೊಡ್ಡ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕರಾದ ಡಾ ಎಚ್. ಡಿ. ರಂಗನಾಥ್ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ರವರ ಸಹಕಾರ ಮತ್ತು ತಾಲ್ಲೂಕಿನ ಮತದಾರರ ಆಶೀರ್ವಾದದಿಂದ ಕುಣಿಗಲ್ ದೊಡ್ಡಕೆರೆಗೆ ೪ನೇ ಬಾರಿ ಗಂಗಾ ಪೂಜೆ ಮಾಡಿ ಬಾಗಿನ ಅರ್ಪಿಸುವ ಸೌಭಾಗ್ಯ ನನ್ನದಾಗಿದೆ. ಶೀಘ್ರದಲ್ಲೇ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಳ ಪರಿಶೀಲಿಸಿ ಎಲ್ಲ ಅಡೆತಡೆಗಳನ್ನು ನಿವಾರಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿ ನಡೆಯಲಿದೆ. ಕುಣಿಗಲ್ ಪಟ್ಟಣದ ಜನತೆಗೆ ಎರಡು ದಿನಕ್ಕೊಮ್ಮೆ ಶುದ್ಧ ಕುಡಿಯುವ ನೀರನ್ನು ಪುರಸಭಾಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಪುರಸಭೆ ಸಿಬ್ಬಂದಿ ವರ್ಗದವರ ಸಹಕಾರದಿಂದ ನೀರು ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ರೀತಿ ನೀರನ್ನು ನೀಡುತ್ತೇವೆ. ಕುಣಿಗಲ್ ನಾಗರಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಕದೆ ಪುರಸಭೆಯಿಂದ ಬರುವ ಕಸದ ಗಾಡಿಗೆ ಕಸವನ್ನು ಹಾಕುವ ಮೂಲಕ ಕುಣಿಗಲ್ ಪಟ್ಟಣದ ಶುಚಿತ್ವವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಕಸವನ್ನು ಎಲ್ಲೆಂದರಲ್ಲಿ ಬಿಸಾಕಿದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕುಣಿಗಲ್ ದೊಡ್ಡಕೆರೆ ನೀರು ಕಡಿಮೆಯಾದ ನಂತರ ಕೆರೆಯ ತೂಬನ್ನು ಸರಿಪಡಿಸಿ ಕೆರೆ ಹಿಂಭಾಗದ ಅಚ್ಚುಕಟ್ಟುದಾರಿಗೆ ಬೆಳೆ ಬೆಳೆಯಲು ನೀರನ್ನು ಕೊಡುವ ಎಲ್ಲ ಪ್ರಯತ್ನ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಮಂಜುಳ ನಾಗರಾಜ್ ಮಲ್ಯ, ಕೊತ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಮ್ಮ. ಉಪಾಧ್ಯಕ್ಷ ಶ್ರೀನಿವಾಸ್, ತಹಶೀಲ್ದಾರ್ ರಶ್ಮಿ, ಹೇಮಾವತಿ ನಾಲಾವಲಯದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಪುರಸಭೆ ಸದಸ್ಯರಾದ ಅರುಣ್‌ಕುಮಾರ್, ರಂಗಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸುಂದರ ಕುಪ್ಪೆ ಪಾಪಣ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮತಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.


























