ಕೃತಿಕಾ ರೆಡ್ಡಿ ಹತ್ಯೆ: ಪತಿ ವಿರುದ್ಧ ಆರೋಪ ಪಟ್ಟಿ

ಬೆಂಗಳೂರು,ಜ.೯-ಕಳೆದ ವರ್ಷ ನಡೆದಿದ್ದ ವೈದ್ಯ ಪತಿಯಿಂದಲೇ ಪತ್ನಿ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ಪೂರ್ಣಗೊಳಿಸಿರುವ ಮಾರತ್ ಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅಂತಿಮ ಸಿದ್ಧತೆ ನಡೆಸಿದ್ದಾರೆ.


ವೈದ್ಯೆ ಕೃತಿಕಾ ರೆಡ್ಡಿ ಪತಿ ವೈದ್ಯ ಮಹೇಂದ್ರ ರೆಡ್ಡಿ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಿದ್ಧಪಡಿಸಿದ್ದಾರೆ.ಸುಮಾರು ೧೨೦೦ ಪುಟಗಳ ಬೃಹತ್ ಚಾರ್ಜ್ ಶೀಟ್ ಇಂದು ಎಸಿಜೆಎಂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.


ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪೊಲೀಸರು ತಾಂತ್ರಿಕ ಹಾಗೂ ಎಫ್‌ಎಸ್‌ಎಲ್ ವರದಿಗಳು ಸೇರಿದಂತೆ ೭೨ಕ್ಕೂ ಹೆಚ್ಚು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿ ಚಾರ್ಜ್ ಶೀಟ್‌ನಲ್ಲಿ ದಾಖಲಿಸಿದ್ದಾರೆ. ಡಿಜಿಟಲ್ ಸಾಕ್ಷ್ಯಗಳು, ವೈದ್ಯಕೀಯ ವಿವರಗಳು, ತಾಂತ್ರಿಕ ಹಾಗೂ ಎಫ್‌ಎಸ್‌ಎಲ್ ವರದಿಗಳ ಆಧಾರದ ಮೇಲೆ ಮಹೇಂದ್ರ ರೆಡ್ಡಿಯನ್ನು ಆರೋಪಿಯನ್ನಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿ ಮಹೇಂದ್ರ ರೆಡ್ಡಿ ಅನೆಸ್ತೇಷಿಯಾ ಔಷಧ ಖರೀದಿಸಿದ ವಿವರಗಳು, ಮೆಡಿಕಲ್ ಸ್ಟೋರ್‌ಗೆ ಹೋಗಿ ಬರುವ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಯುಪಿಐ ಮೂಲಕ ಹಣ ಪಾವತಿ ಮಾಡಿದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ನಂತರ, ಮಹೇಂದ್ರ ರೆಡ್ಡಿ ತನ್ನ ಸ್ನೇಹಿತೆಯೊಂದಿಗೆ ನಡೆಸಿದ್ದ ಫೋನ್ ಚಾಟಿಂಗ್ ವಿವರಗಳನ್ನು ರಿಟ್ರೀವ್ ಮಾಡಲಾಗಿದ್ದು, ಇದರಲ್ಲಿ ಪ್ರಮುಖ ಎಂಟು ಮೆಸೇಜ್‌ಗಳಲ್ಲಿ ಕೊಲೆಯ ರಹಸ್ಯ ಅಡಗಿತ್ತು. ಕೊಲೆ ನಡೆದ ಒಂದೂವರೆ ತಿಂಗಳ ನಂತರವೂ ಕೊಲೆಯ ಸತ್ಯವನ್ನು ಬಚ್ಚಿಡಲಾಗದೆ, ಮಹೇಂದ್ರ ರೆಡ್ಡಿ ತನ್ನ ಸ್ನೇಹಿತೆಯ ಬಳಿ ಫೋನ್ ಚಾಟಿಂಗ್‌ನಲ್ಲಿ ಈ ರಹಸ್ಯವನ್ನು ಬಿಚ್ಚಿಟ್ಟಿರುವ ಅಂಶವನ್ನ ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಕೃತಿಕಾ ರೆಡ್ಡಿಗೆ ನೀಡಲಾಗಿದ್ದ ಅನೆಸ್ತೇಷಿಯಾ ಕುರಿತ ಎಫ್‌ಎಸ್‌ಎಲ್ ವರದಿಯು ಔಷಧ ನೀಡಿರುವುದನ್ನು ದೃಢಪಡಿಸಿದೆ. ರಕ್ತದ ಮಾದರಿ, ಕ್ಯಾನುಲಾ ಹಾಗೂ ಕೃತಿಕಾ ಕಾಲಿನಿಂದ ಸಂಗ್ರಹಿಸಿದ ಮಾದರಿಗಳ ಎಫ್‌ಎಸ್‌ಎಲ್ ವರದಿಯಲ್ಲಿ ’ನೆರೋಪ್ ಎಂಬ ಔಷಧವನ್ನು ಬಳಸಿದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.


ಇದಲ್ಲದೆ, ಮಹೇಂದ್ರ ರೆಡ್ಡಿಯ ಸಿಡಿಆರ್ ಹಾಗೂ ಅವರ ಸ್ನೇಹಿತೆಯ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೃತಿಕಾ ಪೋಷಕರು, ಮಹೇಂದ್ರ ರೆಡ್ಡಿ ಪೋಷಕರು ಹಾಗೂ ಸ್ನೇಹಿತರು, ಸ್ನೇಹಿತೆಯರ ಹೇಳಿಕೆಗಳನ್ನೂ ಸಹ ದಾಖಲಿಸಿ ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗಿದೆ. ಮಾರತ್ತಹಳ್ಳಿ ಪೊಲೀಸರು ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಸಮಗ್ರ ಚಾರ್ಜ್ ಶೀಟ್ ಸಿದ್ಧಪಡಿಸಿದ್ದಾರೆ.


ಡಾ.ಕೃತಿಕಾ ರೆಡ್ಡಿ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿದ್ದರು. ಪತಿ ಮಹೇಂದ್ರ ರೆಡ್ಡಿ ಇದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ. ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿ ಹಿರಿಯರ ಸಮ್ಮುಖದಲ್ಲಿ ೨೦೨೪ರ ಮೇ ೨೪ರಂದು ಮದುವೆಯಾಗಿದ್ದರು.


ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಕೃತಿಕಾಗೆ ಮಹೇಶ್ ರೆಡ್ಡಿ ಮನೆಯಲ್ಲೇ ಚಿಕಿತ್ಸೆ ನೀಡಿದ್ದರು. ಈ ವೇಳೆ ೨೦೨೪ರ ಎಫ್‌ಐಆರ್ ೨೩ರಂದು ಕೃತಿಕಾ ಸಾವನ್ನಪ್ಪಿದ್ದರು. ಆ ನಂತರ ಎಫ್‌ಎಸ್‌ಎಲ್ ವರದಿ ಬಳಿಕ ಸತ್ಯಾಂಶ ಹೊರಬಿದ್ದಿತ್ತು. ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ನೆಪವೊಡ್ಡಿ ಮಹೇಂದ್ರ ರೆಡ್ಡಿ ಬೇರೆ ಔಷಧಿಗಳನ್ನು ನೀಡುವ ಸಮಯದಲ್ಲಿ ಹೆಚ್ಚುವರಿ ಅನಸ್ತೇಶಿಯಾ ನೀಡಿದ್ದರು ಎಂಬ ಆರೋಪ ಸಂಬಂಧ ಮಾರತ್ ಹಳ್ಳಿ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು.