ರಾಮಮಂದಿರದಲ್ಲಿ ಕೃಷ್ಣ ವೇಷಧಾರಿಗಳ ಸಂಭ್ರಮ

ತುಮಕೂರು, ಆ. ೨೦- ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀಕೃಷ್ಣನ ಕಲರವ. ಅಂಬೆಗಾಲುಕೃಷ್ಣ, ಮುದ್ದುಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ ಹೀಗೆ ವಿವಿಧ ವಯೋಮಾನದ ಕೃಷ್ಣ ವೇಷಧಾರಿಗಳು ಮಿಂಚಿ ಮರೆದರು. ಅವರ ಅಮ್ಮಂದಿರು ಯಶೋಧೆಯರಾಗಿ ವೇಷಧಾರಿ ಮಕ್ಕಳೊಂದಿಗೆ ಸಂಭ್ರಮಿಸಿದರು.


ನಗರದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಹಮ್ಮಿಕೊಂಡಿದ್ದ ೩೯ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಕೃಷ್ಣ ವೇಷ ಸ್ಪರ್ಧಿಗಳಿಂದ ತುಂಬಿ ಹೋಗಿ ಶ್ರೀರಾಮ ಮಂದಿರ ಗೋಕುಲದಂತಾಗಿತ್ತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಭಗವಾನ್ ಕೃಷ್ಣನ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸುವಂತೆ ತಿಳಿಸಿದರು.
ಕೃಷ್ಣ ಬೊಧಿಸಿದ ಭಗವದ್ಗೀತೆಯ ಸಾರವನ್ನು ಸಾರಿ ಹೇಳಬೇಕು. ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಸಾಂಪ್ರದಾಯಕ ಕಲೆ, ಕ್ರೀಡೆಗಳನ್ನು ಜನಪ್ರಿಯಗೊಳಿಸಬೇಕು ಎಂದು ಹೇಳಿದರು.


ಸಂಸ್ಕಾರ ಭಾರತಿ ಸಂಸ್ಥೆ ಅಧ್ಯಕ್ಷ ಬಿ.ಆರ್.ನಟಟರಾಜಶೆಟ್ಟಿ, ಜನ್ಮಾಷ್ಟಮಿ ಸಮಿತಿ ಅಧ್ಯಕ್ಷೆ ರೇಖಾ ಮಹೇಶ್ ಭಾಗವಹಿಸಿದ್ದರು. ವಿವಿಧ ವಯೋಮಾನದ ಮಕ್ಕಳು ಹಾಗೂ ವಿಶೇಷ ಚೇತನರು ಕೃಷ್ಣ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇದರ ಅಂಗವಾಗಿ ನಡೆದ ವಿವಿಧ ಸ್ಪರ್ಧೆ ವಿಜೇತರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರ ಗಣ್ಯರು ಬಹುಮಾನ ವಿತರಿಸಿದರು.


ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಸಂದೀಪ್‌ಗೌಡ, ಉಪಾಧ್ಯಕ್ಷರಾದ ಗ.ಸಿ.ಶ್ರೀನಿವಾಸ್, ಜಿ.ಕೆ.ಶ್ರೀನಿವಾಸ್, ಜಿ.ಎಸ್.ಬಸವರಾಜು, ಡಾ.ಜಿ.ಎಸ್.ಕೆಂಪಯ್ಯ, ಜಯಶಂಕರಮೂರ್ತಿ, ವಿಜಯಮ್ಮ, ರೇಖಾ ಶಿವಕುಮಾರ್, ವಸಂತರಂಭಾಪುರಿ, ಚೈತ್ರ ಮಂಜುನಾಥ್, ಜನಾರ್ಧನ, ಪ್ರಧಾನ ಕಾರ್ಯದರ್ಶಿ ಅನಿತಾರಮೇಶ್, ಕೆ.ಶಂಕರ್ ಉಪ್ಪಾರಹಳ್ಳಿ, ಖಜಾಂಚಿ ಕೆ.ಪರಶುರಾಮಯ್ಯ ಸೇರಿದಂತೆ ಸಂಚಾಲಕರು, ಸಹಸಂಚಾಲಕರು, ಸಂಯೋಜಕರು, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.