
ಕಲಬುರಗಿ.ಸೆ.೯- ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿ ದಾಳಿ ನಡೆಸಿದ್ದಾರೆ.
ಕಲಬುರಗಿ ನಗರದ ನ್ಯೂ ಓಜಾ ಲೇಔಟ್‌ನಲ್ಲಿರುವ ಪಶುವೈದ್ಯ ನೇಮಕಾತಿ ಅಭ್ಯರ್ಥಿ ಮಮತಾ ನಿವಾಸದ ಮೇಲೆ ಬೆಂಗಳೂರು ಸಿಐಡಿ ಡಿವೈಎಸ್‌ಪಿ ಹಾಗೂ ಕಲಬುರಗಿ ಡಿವೈಎಸ್‌ಪಿ ಅಸ್ಲಾಂ ಪಾಷಾ ನೇತೃತ್ವದ ತಂಡ ದಾಳಿ ನಡೆಸಿದೆ
ಮಮತಾ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಕಡೆಯ ಅಭ್ಯರ್ಥಿ ಎಂಬ ಆರೋಪ ಕೇಳಿಬಂದಿದ್ದು,ಶಾಂತಾ ಹೊಸಮನಿ ಮೂಲಕ ಡೀಲ್ ಮಾಡಿ ನೇಮಕಾತಿ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದೇ ವೇಳೆ, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಕುರಿತಂತೆ ೫೨ನೇ ಸಿಸಿಹೆಚ್ ನ್ಯಾಯಾಲಯ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು.ಶಾಂತಾ ಹೊಸಮನಿಗೆ ಸಂಬಂಧಿಸಿದ ಸಿಡಿಆರ್ ವರದಿಯನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಿಐಡಿ ನೋಟಿಸ್ ನೀಡಿದ ಬಳಿಕ ಶಾಂತಾ ಹೊಸಮನಿ ತಲೆಮರೆಸಿಕೊಂಡಿದ್ದಾರೆನ್ನಲಾಗಿದ್ದು, ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ರದ್ದಾದರೆ, ಶಾಂತಾ ಹೊಸಮನಿ ಅವರನ್ನು ಬಂಧಿಸುವ ಸಾಧ್ಯತೆ ಇದೆ.


























